T20 ಕ್ರಿಕೆಟ್ ನಲ್ಲಿ 4,000 ರನ್, 200 ವಿಕೆಟ್; ಐತಿಹಾಸಿಕ ಸಾಧನೆಗೈದ ರವೀಂದ್ರ ಜಡೇಜ

ರವೀಂದ್ರ ಜಡೇಜ | Photo Credit : PTI
ಹೊಸದಿಲ್ಲಿ, ಎ.11: ರಾಜಸ್ಥಾನ ರಾಯಲ್ಸ್ ತಂಡವು ಗುವಾಹಟಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ RCB ವಿರುದ್ಧ ರೋಚಕ ಜಯ ಸಾಧಿಸಿದೆ. ಈ ವೇಳೆ ಹಿರಿಯ ಆಟಗಾರ ರವೀಂದ್ರ ಜಡೇಜ ವೈಯಕ್ತಿಕವಾಗಿ ಮಹತ್ವದ ಮೈಲಿಗಲ್ಲು ತಲುಪಿದರು.
ಆಲ್ರೌಂಡರ್ ಜಡೇಜ ಅವರು ಹಾರ್ದಿಕ್ ಪಾಂಡ್ಯ ನಂತರ T20 ಕ್ರಿಕೆಟ್ ನಲ್ಲಿ 4,000 ರನ್ ಹಾಗೂ 200 ವಿಕೆಟ್ ಗಳ ಡಬಲ್ ಸಾಧನೆಗೈದ ಭಾರತದ ಎರಡನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು.
RCB ವಿರುದ್ಧ ಶುಕ್ರವಾರ ನಡೆದ IPL ಪಂದ್ಯದಲ್ಲಿ ಗೆಲ್ಲಲು 202 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವು ಇನ್ನೂ ಎರಡು ಓವರ್ ಗಳು ಬಾಕಿ ಇರುವಾಗಲೇ ಆರು ವಿಕೆಟ್ ಗಳ ಅಂತರದಿಂದ ಜಯಶಾಲಿಯಾಯಿತು. ವೈಭವ್ ಸೂರ್ಯವಂಶಿ (78 ರನ್, 26 ಎಸೆತ), ಧ್ರುವ ಜುರೆಲ್ (ಔಟಾಗದೆ 81, 43 ಎಸೆತ) ಹಾಗೂ ಜಡೇಜ (ಔಟಾಗದೆ 24, 25 ಎಸೆತ) ರನ್ ಚೇಸ್ ವೇಳೆ ನಿರ್ಣಾಯಕ ಕೊಡುಗೆ ನೀಡಿದರು.
ಮಧ್ಯ ಓವರ್ ಗಳಲ್ಲಿ ಬ್ಯಾಟಿಂಗ್ಗೆ ಇಳಿದ ಜಡೇಜ ಅವರು ಜುರೆಲ್ ಜೊತೆಗೆ ಐದನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 68 ರನ್ ಸೇರಿಸಿದರು. RCBಯ ಮರು ಹೋರಾಟದ ವಿಶ್ವಾಸಕ್ಕೆ ಹಿನ್ನಡೆ ಉಂಟುಮಾಡಿದರು. ಸೂರ್ಯವಂಶಿ, ಶಿಮ್ರೊನ್ ಹೆಟ್ಮೆಯರ್ ಹಾಗೂ ನಾಯಕ ರಿಯಾನ್ ಪರಾಗ್ ಸತತವಾಗಿ ಔಟಾದಾಗ ಜಡೇಜ ರಾಜಸ್ಥಾನ ಇನಿಂಗ್ಸ್ ಗೆ ಬಲ ತುಂಬಿದರು.
RCB ವಿರುದ್ಧ ಪಂದ್ಯದಲ್ಲಿ ಜಡೇಜ 14 ರನ್ ಗೆ ಒಂದು ವಿಕೆಟ್ ಪಡೆದರು. ಬ್ಯಾಟಿಂಗ್ ನಲ್ಲಿ ಔಟಾಗದೆ 24 ರನ್ (25 ಎಸೆತ, 1 ಬೌಂಡರಿ) ಗಳಿಸಿದರು.






