ರವೀಂದ್ರ ಜಡೇಜಗೆ 600 ವಿಕೆಟ್ : ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ಭಾರತದ 5ನೇ ಬೌಲರ್

Photo - X
ಹೊಸದಿಲ್ಲಿ: ಹಿರಿಯ ಆಲ್ರೌಂಡರ್ ರವೀಂದ್ರ ಜಡೇಜ ಮಹತ್ವದ ಮೈಲಿಗಲ್ಲು ತಲುಪಿದ್ದು, ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ 600 ಅಂತರರಾಷ್ಟ್ರೀಯ ವಿಕೆಟ್ ಗಳನ್ನು ಪಡೆದ ಭಾರತದ 5ನೇ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು.
ನಾಗ್ಪುರದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ 3 ವಿಕೆಟ್ ಗಳನ್ನು ಪಡೆದಿರುವ ಜಡೇಜರಿಂದ ಈ ಸಾಧನೆ ಹೊರಹೊಮ್ಮಿದೆ.
9 ಓವರ್ಗಳಲ್ಲಿ 26 ರನ್ಗೆ 3 ವಿಕೆಟ್ ಗಳನ್ನು ಪಡೆದಿರುವ ಜಡೇಜ ಭಾರತ ತಂಡವು ಇಂಗ್ಲೆಂಡ್ ತಂಡವನ್ನು 47.4 ಓವರ್ಗಳಲ್ಲಿ 248 ರನ್ಗೆ ನಿಯಂತ್ರಿಸುವಲ್ಲಿ ನೆರವಾಗಿದ್ದರು. ಈ ಪಂದ್ಯದಲ್ಲಿ ಮೂರು ವಿಕೆಟ್ ಪಡೆದಿರುವ ಜಡೇಜ ಅವರು 600 ವಿಕೆಟ್ ಮೈಲಿಗಲ್ಲು ತಲುಪಿದ್ದಾರೆ.
ಜಡೇಜ ಅವರು ಭಾರತೀಯ ಬೌಲಿಂಗ್ ಲೆಜೆಂಡ್ಗಳಾದ ಅನಿಲ್ ಕುಂಬ್ಳೆ(953 ವಿಕೆಟ್), ರವಿಚಂದ್ರನ್ ಅಶ್ವಿನ್(765), ಹರ್ಭಜನ್ ಸಿಂಗ್(707) ಹಾಗೂ ಕಪಿಲ್ ದೇವ್(687 ವಿಕೆಟ್)ಅವರನ್ನೊಳಗೊಂಡ ಪ್ರತಿಷ್ಠಿತ ಗುಂಪಿಗೆ ಸೇರಿದ್ದಾರೆ.
15ನೇ ಓವರ್ನಲ್ಲಿ ಬೌಲಿಂಗ್ ದಾಳಿ ಆರಂಭಿಸಿದ ಜಡೇಜ ತಕ್ಷಣವೇ ಪಿಚ್ನಲ್ಲಿ ಚುರುಕಿನ ಟರ್ನ್ ಪಡೆದರು. ಜೋ ರೂಟ್ರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸುವ ಮೂಲಕ ಮೊದಲ ವಿಕೆಟ್ ಪಡೆದರು. ಆನಂತರ 51 ರನ್ ಗಳಿಸಿದ್ದ ಜೇಕಬ್ ಬೆಥೆಲ್ಗೆ ಪೆವಿಲಿಯನ್ಗೆ ಹಾದಿ ತೋರಿಸಿದರು. ಆದಿಲ್ ರಶೀದ್ರನ್ನು ಕ್ಲೀನ್ಬೌಲ್ಡ್ ಮಾಡಿದ ಜಡೇಜ ಒಟ್ಟು 3 ವಿಕೆಟ್ ಗಳನ್ನು ಪಡೆದರು.
2009ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟ ನಂತರ ಜಡೇಜ ಅವರು ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ತನ್ನ ಆಲ್ರೌಂಡ್ ಸಾಮರ್ಥ್ಯದ ಮೂಲಕ ತಂಡದ ಯಶಸ್ಸಿನಲ್ಲಿ ನಿರಂತರವಾಗಿ ಕೊಡುಗೆ ನೀಡುತ್ತಾ ಬಂದಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ 323 ವಿಕೆಟ್ ಗಳನ್ನು ಪಡೆದಿರುವ ಜಡೇಜ 3,370 ರನ್ ಗಳಿಸಿದ್ದರು. ಏಕದಿನ ಕ್ರಿಕೆಟ್ ನಲ್ಲಿ 198 ಪಂದ್ಯಗಳಲ್ಲಿ 223 ವಿಕೆಟ್ ಗಳನ್ನು ಪಡೆದಿದ್ದಾರೆ. ಇದರಲ್ಲಿ 2 ಐದು ವಿಕೆಟ್ ಗೊಂಚಲು ಇದೆ.
2024ರಲ್ಲಿ ಭಾರತ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಜಯಿಸಿದ ನಂತರ ಜಡೇಜ ಅವರು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಿಂದ ನಿವೃತ್ತಿಯಾಗಿದ್ದರು.
50 ಓವರ್ ಕ್ರಿಕೆಟ್ ಪಂದ್ಯದಲ್ಲಿ 200 ವಿಕೆಟ್ ಗಳನ್ನು ಪಡೆದ ಭಾರತದ 7 ಬೌಲರ್ಗಳ ಪೈಕಿ ಜಡೇಜ ಕೂಡ ಒಬ್ಬರು. ಅನಿಲ್ ಕುಂಬ್ಳೆ, ಕಪಿಲ್ದೇವ್, ಜಾವಗಲ್ ಶ್ರೀನಾಥ್, ಝಹೀರ್ ಖಾನ್, ಅಜಿತ್ ಅಗರ್ಕರ್ ಹಾಗೂ ಹರ್ಭಜನ್ ಸಿಂಗ್ 200ಕ್ಕೂ ಅಧಿಕ ವಿಕೆಟ್ ಗಳನ್ನು ಪಡೆದಿದ್ದಾರೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ
https://whatsapp.com/channel/0029VaA8ju86LwHn9OQpEq28
6⃣0⃣0⃣ international wickets and counting!
— BCCI (@BCCI) February 6, 2025
Congratulations, Ravindra Jadeja
Follow The Match ▶️ https://t.co/lWBc7oPRcd#TeamIndia | #INDvENG | @IDFCFIRSTBank | @imjadeja pic.twitter.com/Qej9oaRWbb







