ಆರ್ಸಿಬಿ ಮಾಲಕತ್ವ ಶೀಘ್ರದಲ್ಲೇ ಬದಲಾವಣೆ?
ಸಂಪೂರ್ಣ ಪಾಲನ್ನು ಮಾರಾಟ ಮಾಡಲು ತಯಾರಾದ Diageo Plc

PC : RCB
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲಕತ್ವವು ಶೀಘ್ರದಲ್ಲೇ ಬದಲಾಗುವುದಾಗಿ ವರದಿಯಾಗಿದೆ.
18 ಸೀಸನ್ ಗಳಲ್ಲಿ ಮೊಟ್ಟ ಮೊದಲ ಬಾರಿಗೆ ಐಪಿಎಲ್ ಟ್ರೋಫಿಯನ್ನು ಆರ್ ಸಿಬಿ ತಂಡವು ತನ್ನದಾಗಿಸಿಕೊಂಡ ಕೆಲವೇ ದಿನಗಳ ಅಂತರದಲ್ಲಿ ಈ ಬೆಳವಣಿಗೆ ನಡೆದಿದೆ.
ತನ್ನ ಭಾರತೀಯ ಅಂಗಸಂಸ್ಥೆ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಮೂಲಕ ಆರ್ಸಿಬಿಯ ಮಾಲಕತ್ವವನ್ನು ಹೊಂದಿರುವ ಬ್ರಿಟಿಷ್ ಕಂಪನಿಯಾದ ಡಿಯಾಜಿಯೊ ಪಿಎಲ್ಸಿ (Diageo Plc), ಫ್ರಾಂಚೈಸಿಯಲ್ಲಿನ ತನ್ನ ಪಾಲಿನ ಒಂದು ಭಾಗವನ್ನು ಅಥವಾ ಸಂಪೂರ್ಣ ಪಾಲನ್ನು ಮಾರಾಟ ಮಾಡುವ ಆಯ್ಕೆಗಳನ್ನು ನೋಡುತ್ತಿದೆ ಎಂದು ʼಬ್ಲೂಮ್ಬರ್ಗ್ʼ ವರದಿ ಮಾಡಿದೆ.
ವರದಿಯಲ್ಲಿ ಉಲ್ಲೇಖಿಸಲಾದ ಪ್ರಕಾರ, Diageo ಸಂಸ್ಥೆಯು ಸಲಹೆಗಾರರೊಂದಿಗೆ ಆರಂಭಿಕ ಮಾತುಕತೆಗಳನ್ನು ಪ್ರಾರಂಭಿಸಿದ್ದು, ಪೂರ್ಣ ಮಾರಾಟ ಸೇರಿದಂತೆ ವಿವಿಧ ಸಾಧ್ಯತೆಗಳಿಗೆ ಮುಕ್ತವಾಗಿದೆ. ಕಂಪನಿಯು ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲವಾದರೂ, ತಂಡವನ್ನು 2 ಬಿಲಿಯನ್ ಡಾಲರ್ ವರೆಗೆ ಮೌಲ್ಯೀಕರಿಸಲು ಪ್ರಯತ್ನಿಸಬಹುದು ಎಂದು ವರದಿ ಹೇಳಿದೆ. ಈ ಚರ್ಚೆಗಳು ಇನ್ನೂ ಖಾಸಗಿಯಾಗಿದ್ದು, ಇಲ್ಲಿಯವರೆಗೆ ಯಾವುದೇ ದೃಢವಾದ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.
ಮಾರಾಟದ ಸುದ್ದಿ ಯುನೈಟೆಡ್ ಸ್ಪಿರಿಟ್ಸ್ನ ಷೇರುಗಳಿಗೆ ಉತ್ತೇಜನ ನೀಡಿದ್ದು, ಮಂಗಳವಾರ ಬೆಳಿಗ್ಗೆ ಷೇರು ಮಾರುಕಟ್ಟೆಯಲ್ಲಿ 3.3% ರಷ್ಟು ಏರಿಕೆಯಾಗಿದೆ.