4.5 ಕೋಟಿ ರೂ. ವೆಚ್ಚದಲ್ಲಿ AI ಕ್ಯಾಮರ ವ್ಯವಸ್ಥೆ ಅಳವಡಿಸಲು ಮುಂದಾದ ಆರ್ಸಿಬಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜ. 16: ಬೆಂಗಳೂರಿನ ಎಮ್. ಚಿನ್ನಾಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳು ನಡೆಯುವಂತೆ ಮಾಡುವ ಪ್ರಯತ್ನವಾಗಿ ಮೈದಾನದಲ್ಲಿ ಗುಂಪು ನಿಭಾಯಿಸುವ ದೊಡ್ಡ ಉಪಕ್ರಮವೊಂದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪ್ರಸ್ತಾವಿಸಿದೆ.
ಮೈದಾನದಲ್ಲಿ 300-350 ಕೃತಕ ಬುದ್ಧಿಮತ್ತೆ ಚಾಲಿತ ಕ್ಯಾಮರಗಳನ್ನು ಅಳವಡಿಸುವ ಪ್ರಸ್ತಾವವನ್ನು ಶುಕ್ರವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್ಸಿಎ)ಮುಂದೆ ಆರ್ಸಿಬಿ ಇಟ್ಟಿದೆ ಹಾಗೂ ಅದರ ಸಂಪೂರ್ಣ ವೆಚ್ಚ 4.5 ಕೋಟಿ ರೂ.ವನ್ನು ಭರಿಸುವುದಾಗಿಯೂ ಅದು ಹೇಳಿದೆ.
ಜನರ ಚಲನವಲನಗಳ ಮೇಲೆ ನಿಗಾ ಇಡಲು, ಅವರು ಸರದಿ ಸಾಲುಗಳಲ್ಲಿ ಶಿಸ್ತುಬದ್ಧವಾಗಿ ನಿಲ್ಲುವಂತೆ ಮಾಡಲು, ಜನರು ಅನಧಿಕೃತವಾಗಿ ಒಳಪ್ರವೇಶಿಸುವುದನ್ನು ಮತ್ತು ಹೊರ ಹೋಗುವುದರ ಮೇಲೆ ನಿಗಾ ಇಡಲು ಮತ್ತು ಪ್ರೇಕ್ಷಕರ ಒಟ್ಟಾರೆ ಸುರಕ್ಷತೆಯನ್ನು ಗಣನೀಯವಾಗಿ ಹೆಚ್ಚಿಸಲು ಈ ವ್ಯವಸ್ಥೆಯು ಅಧಿಕಾರಿಗಳಿಗೆ ನೆರವು ನೀಡುತ್ತದೆ ಎಂದು ಆರ್ಸಿಬಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕಳೆದ ವರ್ಷ ಚಿನ್ನಾಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿಯ ಐಪಿಎಲ್ ಟ್ರೋಫಿ ಸಂಭ್ರಮಾಚರಣೆಯ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಈ ದುರಂತದ ಬಳಿಕ ಸ್ಟೇಡಿಯಂನಲ್ಲಿ ಕ್ರಿಕೆಟ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.
ಈಗ ಮೈದಾನದಲ್ಲಿ ಸುರಕ್ಷತೆಯನ್ನು ಮೇಲ್ದರ್ಜೆಗೇರಿಸುವ ಕಸರತ್ತು ಚಾಲ್ತಿಯಲ್ಲಿದೆ. ಅದನ್ನು ಪರಿಶೀಲಿಸಿದ ಬಳಿಕ, ಸರಕಾರ ನೇಮಿಸಿರುವ ಕಾರ್ಯಪಡೆಯೊಂದು ತನ್ನ ವರದಿ ಸಲ್ಲಿಸಲಿದೆ.
ಮೈದಾನದಲ್ಲಿ ಪ್ರೇಕ್ಷಕರ ನಿರ್ವಹಣೆ ಕಳಪೆಯಾಗಿತ್ತು ಎಂದು ತನಿಖೆ ಹೇಳಿದೆ ಹಾಗೂ ಸೂಕ್ತ ಅನುಮೋದನೆಗಳಿಲ್ಲದೆ ಬೃಹತ್ ಪ್ರಮಾಣದಲ್ಲಿ ಜನರು ಒಟ್ಟು ಸೇರುವಂತೆ ಮಾಡಿರುವುದಕ್ಕೆ ಆರ್ಸಿಬಿ ಜವಾಬ್ದಾರಿಯಾಗಿದೆ ಎಂದಿದೆ.







