RCB ಮಹಿಳಾ ತಂಡದ ನೂತನ ಕೋಚ್ ಆಗಿ ಮಲೋಲನ್ ರಂಗರಾಜನ್ ನೇಮಕ

ಮಲೋಲನ್ ರಂಗರಾಜನ್ (Photo: X/@RCBTweets)
ಬೆಂಗಳೂರು: ಮುಂಬರುವ WPL ನಾಲ್ಕನೆ ಆವೃತ್ತಿಗೂ ಮುನ್ನ ಬೆಂಗಳೂರು ರಾಯಲ್ ಚಾಲೆಂಜರ್ಸ್ (RCB) ಫ್ರಾಂಚೈಸಿ ತನ್ನ ಮಹಿಳಾ ತಂಡದ ನೂತನ ತರಬೇತುದಾರರನ್ನಾಗಿ ತಮಿಳುನಾಡಿನ ಮಾಜಿ ಸ್ಪಿನ್ನರ್ ಮಲೋಲನ್ ರಂಗರಾಜನ್ ಅವರನ್ನು ನೇಮಕ ಮಾಡಿದೆ.
2024ರ RCB ಮಹಿಳಾ ತಂಡದ ಮುಖ್ಯ ತರಬೇತುದಾರರಾಗಿದ್ದ ಲ್ಯೂಕ್ ವಿಲಿಯಮ್ಸ್ ಬದಲಿಗೆ ರಂಗರಾಜನ್ ಅವರನ್ನು ನೇಮಕ ಮಾಡಲಾಗಿದೆ. ಬಿಗ್ ಬ್ಯಾಷ್ ಲೀಗ್ ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡದ ಪರವಾಗಿ ಲ್ಯೂಕ್ ವಿಲಿಯಮ್ಸ್ ಒಪ್ಪಂದ ಮಾಡಿಕೊಂಡಿರುವುದರಿಂದ, RCB ತಂಡ ಈ ನಿರ್ಣಯ ಕೈಗೊಂಡಿದೆ.
ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ RCB ಫ್ರಾಂಚೈಸಿ, “ಕಳೆದ ಆರು ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ RCB ಸಹಾಯಕ ಸಿಬ್ಬಂದಿ ವರ್ಗದ ಪ್ರಮುಖ ಸದಸ್ಯರಾಗಿರುವ ಮಲೋಲನ್ ರಂಗರಾಜನ್ ಅವರನ್ನು ಮುಂಬರುವ WPL ಆವೃತ್ತಿಗೆ RCB ಮಹಿಳಾ ತಂಡದ ಮುಖ್ಯ ತರಬೇತುದಾರರನ್ನಾಗಿ ನೇಮಕ ಮಾಡಲಾಗಿದೆ” ಎಂದು ಪ್ರಕಟಿಸಿದೆ.
WPL ಆರಂಭಿಕ ಆವೃತ್ತಿಯಿಂದಲೂ RCB ಮಹಿಳಾ ತಂಡದ ಭಾಗವಾಗಿರುವ ಮಲೋಲನ್ ರಂಗರಾಜನ್, 2024ರ ಋತುವಿನಲ್ಲಿ ಪ್ರಶಸ್ತಿ ಜಯಿಸಿದ RCB ಮಹಿಳಾ ತಂಡದ ಸಹಾಯಕ ತರಬೇತುದಾರರಾಗಿದ್ದರು.







