ಜೇಕಬ್ ಬೆಥೆಲ್ ಬದಲಿಗೆ ಟಿಮ್ ಸೀಫರ್ಟ್ ರನ್ನು ಸೇರಿಸಿಕೊಂಡ ಆರ್ಸಿಬಿ

Photo: x.com/RCBTweets
ಬೆಂಗಳೂರು: ಇಂಗ್ಲೆಂಡ್ ರಾಷ್ಟ್ರೀಯ ಕ್ರಿಕೆಟ್ ತಂಡದ ಪರ ಆಡಲು ಸ್ವದೇಶಕ್ಕೆ ವಾಪಸಾಗಲಿರುವ ಜೇಕಬ್ ಬೆಥೆಲ್ ಬದಲಿಗೆ ಟಿಮ್ ಸೀಫರ್ಟ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ)ತಂಡ ಗುರುವಾರ ಸೇರಿಸಿಕೊಂಡಿದೆ.
‘ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ನಂತರ ರಾಷ್ಟ್ರೀಯ ತಂಡದ ಪರ ಆಡಲು ಇಂಗ್ಲೆಂಡ್ ಗೆ ಮರಳಲಿರುವ ಬ್ಯಾಟರ್ ಟಿಮ್ ಸೀರ್ಫರ್ಟ್ ಅವರನ್ನು ತಾತ್ಕಾಲಿಕ ಬದಲಿಯಾಗಿ ಹೆಸರಿಸಲಾಗಿದೆ’ ಎಂದು ಆರ್ ಸಿ ಬಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸೀರ್ಫರ್ಟ್ 66 ಟಿ-20 ಪಂದ್ಯಗಳನ್ನು ಆಡಿದ್ದು, 1,540 ರನ್ ಗಳಿಸಿದ್ದಾರೆ. 2 ಕೋ.ರೂ.ಗೆ ಆರ್ಸಿಬಿ ತಂಡವನ್ನು ಸೇರಲಿದ್ದಾರೆ.
30ರ ಹರೆಯದ ಸೀಫರ್ಟ್ ಈ ಹಿಂದೆ ಕ್ರಮವಾಗಿ 2021 ಹಾಗೂ 2022ರ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ಹಾಗೂ ಡೆಲ್ಲಿ ಕ್ಯಾಪಿಟಲ್ಸ್(ಡಿಸಿ)ತಂಡದ ಪರ ಆಡಿದ್ದರು.
21ರ ಹರೆಯದ ಬೆಥೆಲ್ ಅವರು ಆರ್ಸಿಬಿ ಪರ 2 ಪಂದ್ಯಗಳನ್ನು ಆಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 67 ರನ್ ಗಳಿಸಿದ್ದರು.
ಬೆಥೆಲ್ ಇಂಗ್ಲೆಂಡ್ ಗೆ ನಿರ್ಗಮಿಸುವ ಮೊದಲು ಮೇ 23ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ಸಿಬಿ ಆಡಲಿರುವ ಪಂದ್ಯಕ್ಕೆ ಲಭ್ಯವಿರಲಿದ್ದಾರೆ. ಮೇ 24ರಿಂದ ಸೀಫರ್ಟ್, ಬದಲಿ ಆಟಗಾರನಾಗಿ ಕಾರ್ಯನಿರ್ವಹಿಸಲಿದ್ದಾರೆ.
ಆರ್ಸಿಬಿ ಮೇ 27ರಂದು ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ.
ಗುಜರಾತ್ ತಂಡವನ್ನು ಪ್ರತಿನಿಧಿಸುತ್ತಿರುವ ಜೋಸ್ ಬಟ್ಲರ್ ಕೂಡಾ ವೆಸ್ಟ್ಇಂಡೀಸ್ ವಿರುದ್ಧ ಸ್ವದೇಶಿ ಸರಣಿಯಲ್ಲಿ ಇಂಗ್ಲೆಂಡ್ ಪರ ಆಡಲು ತೆರಳುತ್ತಿರುವ ಹಿನ್ನೆಲೆಯಲ್ಲಿ ಐಪಿಎಲ್ ನ ಪ್ಲೇ ಆಫ್ ಸುತ್ತಿಗೆ ಅವರು ಲಭ್ಯ ಇರುವುದಿಲ್ಲ.







