ಇಂದು ಅಹ್ಮದಾಬಾದ್ನಲ್ಲಿ ಐಪಿಎಲ್ ಫೈನಲ್ ಪ್ರಶಸ್ತಿಗಾಗಿ ಆರ್ಸಿಬಿ-ಗುಜರಾತ್ ಟೈಟಾನ್ಸ್ ಪೈಪೋಟಿ

RCB vs GT (Credits: BCCI/IPL)
ಅಹ್ಮದಾಬಾದ್, ಮೇ 30: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರವಿವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್-2026ರ ಫೈನಲ್ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಪ್ರಸಕ್ತ ಪಂದ್ಯಾವಳಿಯುದ್ದಕ್ಕೂ ಪಾರಮ್ಯ ಮೆರೆದಿದ್ದ ಉಭಯ ತಂಡಗಳು ಎರಡನೇ ಬಾರಿ ಪ್ರಶಸ್ತಿ ಗೆಲ್ಲಲು ಹೋರಾಡಲಿವೆ.
ರಜತ್ ಪಾಟಿದಾರ್ ನೇತೃತ್ವದ ಆರ್ಸಿಬಿ ತಂಡ ಪ್ರಸಕ್ತ ಋತುವಿನಲ್ಲಿ ಅತ್ಯಮೋಘ ಪ್ರದರ್ಶನ ನೀಡಿ ಲೀಗ್ ಹಂತದ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿತ್ತು. ಕ್ವಾಲಿಫೈಯರ್-1ರಲ್ಲಿ ಗುಜರಾತ್ ತಂಡವನ್ನು 92 ರನ್ಗಳ ಅಂತರದಿಂದ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ.
ಗುಜರಾತ್ ತಂಡ ಅಹ್ಮದಾಬಾದ್ನ ತನ್ನ ತವರು ಮೈದಾನದಲ್ಲಿ ಫೈನಲ್ ಪಂದ್ಯ ಆಡುತ್ತಿರುವ ಹಿನ್ನೆಲೆಯಲ್ಲಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲಾಡುತ್ತಿದೆ.
ಈ ವರ್ಷದ ಐಪಿಎಲ್ನ ಎರಡು ಶ್ರೇಷ್ಠ ತಂಡಗಳು ಪ್ರಶಸ್ತಿಗಾಗಿ ಮತ್ತೊಮ್ಮೆ ಸೆಣಸಾಡಲು ಸಜ್ಜಾಗಿವೆ. ಶುಕ್ರವಾರ ನ್ಯೂ ಚಂಡಿಗಡದಲ್ಲಿ ನಡೆದಿದ್ದ ಕ್ವಾಲಿಫೈಯರ್-2ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಏಳು ವಿಕೆಟ್ಗಳ ಅಂತರದಿಂದ ಜಯಶಾಲಿಯಾಗಿರುವ ಗುಜರಾತ್ ತಂಡ ಫೈನಲ್ನಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಂಡಿದೆ.
ಅಹ್ಮದಾಬಾದ್ನಲ್ಲಿ ಆರ್ಸಿಬಿಗೆ ಮಿಶ್ರ ಫಲ
ಈಗಿನ ಫಾರ್ಮ್ ಪರಿಗಣಿಸಿದರೆ ಆರ್ಸಿಬಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್ಸಿಬಿಯ ಒಟ್ಟು ಐಪಿಎಲ್ ದಾಖಲೆಯು ಸಮತೋಲಿತವಾಗಿದೆ.
ಈ ವರ್ಷ ಗುಜರಾತ್ ತಂಡದ ವಿರುದ್ಧ ಸೋಲು ಸಹಿತ ಆರ್ಸಿಬಿ ಈ ಮೈದಾನದಲ್ಲಿ ಆಡಿರುವ ಎಂಟು ಐಪಿಎಲ್ ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯ ಹಾಗೂ ನಾಲ್ಕರಲ್ಲಿ ಸೋಲುಂಡಿದೆ.
ಅಹ್ಮದಾಬಾದ್ನಲ್ಲಿ ಗುಜರಾತ್ ವಿರುದ್ಧ ಆರ್ಸಿಬಿ ತಂಡ 1ರಲ್ಲಿ ಜಯ, ಇನ್ನೊಂದರಲ್ಲಿ ಸೋಲುಂಡಿದೆ. ಉಭಯ ತಂಡಗಳು ಈ ಋತುವಿನ ಆರಂಭದಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಆಗ ಗುಜರಾತ್ ತಂಡವು ಆರ್ಸಿಬಿಯನ್ನು ಸುಲಭವಾಗಿ ಸೋಲಿಸಿತ್ತು. ಆಗ ಗುಜರಾತ್ ಬೌಲರ್ಗಳು ಆರ್ಸಿಬಿ ತಂಡವನ್ನು 19.2 ಓವರ್ಗಳಲ್ಲಿ ಕೇವಲ 155 ರನ್ಗೆ ನಿಯಂತ್ರಿಸಿದ್ದರು. ಗುಜರಾತ್ ತಂಡ 15.5 ಓವರ್ಗಳಲ್ಲಿ ಗುರಿಯನ್ನು ತಲುಪಿತು. ಶುಭಮನ್ ಗಿಲ್ ಕೇವಲ 18 ಎಸೆತಗಳಲ್ಲಿ 43 ರನ್ ಗಳಿಸಿ ರನ್ ಚೇಸ್ಗೆ ನೇತೃತ್ವ ವಹಿಸಿದ್ದರು. ಆದರೆ ಆರ್ಸಿಬಿ ಇದೇ ಮೈದಾನದಲ್ಲಿನ ಯಶಸ್ಸಿನ ನೆನಪುಗಳನ್ನು ಹೊಂದಿದೆ.
2015ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಅಹ್ಮದಾಬಾದ್ನಲ್ಲಿ ತನ್ನ ಮೊತ್ತ ಮೊದಲ ಐಪಿಎಲ್ ಪಂದ್ಯವನ್ನಾಡಿತ್ತು. ಆಗ ಅದು 9 ವಿಕೆಟ್ಗಳ ಅಂತರದಿಂದ ಜಯ ದಾಖಲಿಸಿತ್ತು. 2021ರ ಐಪಿಎಲ್ನಲ್ಲಿ ಆರ್ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಒಂದು ರನ್ನಿಂದ ರೋಚಕವಾಗಿ ಮಣಿಸಿತ್ತು. ಆ ನಂತರ ಪಂಜಾಬ್ ಕಿಂಗ್ಸ್ಗೂ ಸೋಲಿನ ಬರೆ ಎಳೆದಿತ್ತು.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಆರ್ಸಿಬಿ ತಂಡವು ಪ್ಲೇ ಆಫ್ನಲ್ಲಿ ಸೋಲಿನ ಕಹಿ ಉಂಡಿತ್ತು.
ಆರ್ಸಿಬಿ ತಂಡವು 2022ರ ಐಪಿಎಲ್ನ ಕ್ವಾಲಿಫೈಯರ್-2ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಏಳು ವಿಕೆಟ್ಗಳ ಅಂತರದಿಂದ ಸೋತಿತ್ತು. ಎರಡು ವರ್ಷಗಳ ನಂತರ ರಾಜಸ್ಥಾನ ತಂಡವು ಮತ್ತೊಮ್ಮೆ ಅಹ್ಮದಾಬಾದ್ನಲ್ಲಿ ಆರ್ಸಿಬಿ ತಂಡದ ಅಭಿಯಾನವನ್ನು ಅಂತ್ಯಗೊಳಿಸಿತ್ತು. ಐಪಿಎಲ್-2024ರಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ತಂಡವು ನಾಲ್ಕು ವಿಕೆಟ್ಗಳಿಂದ ಜಯ ಗಳಿಸಿತ್ತು.
ಆರ್ಸಿಬಿ ತಂಡ ಅಹ್ಮದಾಬಾದ್ನಲ್ಲಿ ಕೆಲವು ಸ್ಮರಣೀಯ ಕ್ಷಣಕ್ಕೂ ಸಾಕ್ಷಿಯಾಗಿದೆ. ಐಪಿಎಲ್-2025ರಲ್ಲಿ ಆರ್ಸಿಬಿ ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಆರು ರನ್ಗಳಿಂದ ಮಣಿಸಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಈ ಮೂಲಕ 18 ವರ್ಷಗಳಿಂದ ಕಾಡುತ್ತಿದ್ದ ಪ್ರಶಸ್ತಿ ಬರ ನೀಗಿಸಿಕೊಂಡಿತ್ತು.
ಆರ್ಸಿಬಿ ತಂಡವು ಈ ಋತುವಿನಲ್ಲಿ ಎರಡು ಬಾರಿ ಗುಜರಾತ್ ತಂಡವನ್ನು ಸೋಲಿಸಿದೆ. ಇದರಲ್ಲಿ ಕ್ವಾಲಿಫೈಯರ್-1ರಲ್ಲಿನ ಗೆಲುವು ಕೂಡ ಸೇರಿದೆ. ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಸಮತೋಲಿತ ಬೌಲಿಂಗ್ ದಾಳಿಯು ಐಪಿಎಲ್-2026ರಲ್ಲಿ ಆರ್ಸಿಬಿಯನ್ನು ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ತಂಡವನ್ನಾಗಿಸಿದೆ.
2025ರಲ್ಲಿ ದೀರ್ಘಕಾಲದ ಕನಸನ್ನು ನನಸಾಗಿಸಿಕೊಂಡಿದ್ದ ಆರ್ಸಿಬಿ ತಂಡವು ಮತ್ತೊಮ್ಮೆ ಪ್ರಾಬಲ್ಯ ಸಾಧಿಸಿ ಇತಿಹಾಸ ರಚಿಸುವ ವಿಶ್ವಾಸದಲ್ಲಿದೆ. ಪಾಟಿದಾರ್ ನಾಯಕತ್ವದಲ್ಲಿ ಸದ್ಯ ಸ್ಥಿರ ಪ್ರದರ್ಶನ ನೀಡುತ್ತಿರುವ ಆರ್ಸಿಬಿಗೆ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಇನ್ನೊಂದು ಗೆಲುವಿನ ಅಗತ್ಯವಿದೆ.
ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿ ಹಾಲಿ ಚಾಂಪಿಯನ್ ಆಗಿ ಆಡುತ್ತಿರುವ ಆರ್ಸಿಬಿ ತಂಡವು ರವಿವಾರ ಗುಜರಾತ್ ತಂಡವನ್ನು ಮತ್ತೊಮ್ಮೆ ಎದುರಿಸಲಿದೆ.
ಆರ್ಸಿಬಿಯ ಫೈನಲ್ ಹಾದಿಯ ಅವಲೋಕನ..
ಬೆಂಗಳೂರಿನಲ್ಲಿ ನಡೆದಿದ್ದ ಉದ್ಘಾಟನಾ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆರು ವಿಕೆಟ್ಗಳ ಅಂತರದಿಂದ ಜಯ ಸಾಧಿಸಿದ್ದ ಆರ್ಸಿಬಿ ತನ್ನ ಅಭಿಯಾನ ಆರಂಭಿಸಿತ್ತು. ವಿರಾಟ್ ಕೊಹ್ಲಿ(69 ರನ್)ಗೆಲುವಿನ ರೂವಾರಿಯಾಗಿದ್ದರು. ಆ ನಂತರ ಸಿಎಸ್ಕೆ ವಿರುದ್ಧ 43 ರನ್ಗಳಿಂದ ಜಯ ಸಾಧಿಸಿತ್ತು. ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮೊದಲ ಹಿನ್ನಡೆ ಕಂಡಿತ್ತು. ಆಗ 200ಕ್ಕೂ ಅಧಿಕ ರನ್ ಗಳಿಸಿದ್ದರೂ ವೈಭವ್ ಸೂರ್ಯವಂಶಿ ಅಬ್ಬರಕ್ಕೆ ತತ್ತರಿಸಿದ್ದ ಆರ್ಸಿಬಿ ಸೋಲುಂಡಿತ್ತು. ಈ ಸೋಲು ಆರ್ಸಿಬಿಯ ಲಯಕ್ಕೆ ಸ್ವಲ್ಪ ಧಕ್ಕೆವುಂಟು ಮಾಡಿತು.
ಮುಂಬೈ ಇಂಡಿಯನ್ಸ್ ಹಾಗೂ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ಸತತ ಗೆಲುವು ಸಾಧಿಸಿದ ಆರ್ಸಿಬಿ ಮತ್ತೆ ಪುಟಿದೆದ್ದಿತು. ವಾಂಖೆಡೆ ಸ್ಟೇಡಿಯಂನಲ್ಲಿ 4 ವಿಕೆಟ್ಗಳ ನಷ್ಟಕ್ಕೆ 240 ರನ್ ಗಳಿಸಿತು. ಮುಂಬೈ ತಂಡವನ್ನು 5ಕ್ಕೆ 225 ರನ್ಗೆ ನಿಯಂತ್ರಿಸಿತು. ಲಕ್ನೊ ವಿರುದ್ಧ ತನ್ನ ಬೌಲಿಂಗ್ ಶಕ್ತಿ ಪ್ರದರ್ಶಿಸಿ 146 ರನ್ಗೆ ಆಲೌಟ್ ಮಾಡಿತು.
ಈ ಗೆಲುವುಗಳು ಆರ್ಸಿಬಿಯ ರನ್ರೇಟ್ ಹೆಚ್ಚಿಸಿದವು. ಇದು ಅಂಕಪಟ್ಟಿಯಲ್ಲಿ ನಿರ್ಣಾಯಕ ಪಾತ್ರವಹಿಸಿತು.
ಆರ್ಸಿಬಿ ತಂಡವು ತವರೂರು ಬೆಂಗಳೂರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲ ಸೋಲು ಕಂಡಿತು. ತಕ್ಷಣವೇ ತಿರುಗೇಟು ನೀಡುವಲ್ಲಿ ಯಶಸ್ವಿಯಾಯಿತು. ಗುಜರಾತ್ ಟೈಟಾನ್ಸ್ ಹಾಗೂ ಲಕ್ನೊ ವಿರುದ್ಧ ಸತತ ಸೋಲಿನಿಂದಾಗಿ ಆರ್ಸಿಬಿ ಒತ್ತಡಕ್ಕೆ ಸಿಲುಕಿತ್ತು. ಆಗ ಆರ್ಸಿಬಿ ತಂಡವು 10 ಪಂದ್ಯಗಳಲ್ಲಿ ಆರರಲ್ಲಿ ಜಯ ಸಾಧಿಸಿತ್ತು. ಪ್ಲೇ ಆಫ್ ಸ್ಥಾನ ಗಿಟ್ಟಿಸಲು ಇನ್ನೂ ಎರಡು ಗೆಲುವಿನ ಅಗತ್ಯವಿತ್ತು.
ಹ್ಯಾಟ್ರಿಕ್ ಗೆಲುವು ದಾಖಲಿಸಿದ ಆರ್ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿತು. ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಎಸ್ಆರ್ಎಚ್ ವಿರುದ್ಧ 55 ರನ್ಗಳಿಂದ ಸೋಲುಂಡಿದ್ದರೂ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಿತು. ಗುಜರಾತ್ ಹಾಗೂ ಎಸ್ಆರ್ಎಚ್ನಷ್ಟೇ 18 ಅಂಕಗಳಿಸಿದ್ದ ಆರ್ಸಿಬಿ ಉತ್ತಮ ರನ್ರೇಟ್ ಆಧಾರದಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿತ್ತು.
ನಾಯಕ ರಜತ್ ಪಾಟಿದಾರ್ ಮೊದಲ ಕ್ವಾಲಿಫೈಯರ್ನಲ್ಲಿ ಕೇವಲ 33 ಎಸೆತಗಳಲ್ಲಿ 93 ರನ್ ಗಳಿಸಿ ಆರ್ಸಿಬಿ ತಂಡವು 5 ವಿಕೆಟ್ಗಳ ನಷ್ಟಕ್ಕೆ 254 ರನ್ ಗಳಿಸಲು ನೆರವಾಗಿದ್ದರು. ಬೌಲರ್ಗಳು ಗುಜರಾತ್ ತಂಡವನ್ನು 162 ರನ್ಗೆ ನಿಯಂತ್ರಿಸಿ 92 ರನ್ಗಳಿಂದ ಜಯ ತಂದುಕೊಟ್ಟರು. ಆರ್ಸಿಬಿ ತಂಡವು ಐದನೇ ಬಾರಿ ಐಪಿಎಲ್ ಟೂರ್ನಿಯಲ್ಲಿ ಫೈನಲ್ಗೆ ತಲುಪಿತ್ತು.
ಗುಜರಾತ್ ತಂಡದ ಫೈನಲ್ ಹಾದಿ...
ಕ್ವಾಲಿಫೈಯರ್-2ರಲ್ಲಿ ರಾಜಸ್ಥಾನ ತಂಡವನ್ನು ಮಣಿಸಿರುವ ಗುಜರಾತ್ ತಂಡವು ತನ್ನ ಐದು ವರ್ಷಗಳ ಐಪಿಎಲ್ ಪಯಣದಲ್ಲಿ ಮೂರನೇ ಬಾರಿ ಫೈನಲ್ಗೆ ಲಗ್ಗೆ ಇಟ್ಟಿದೆ. ಲೀಗ್ನ ಅತ್ಯಂತ ಯಶಸ್ವಿ ತಂಡವಾಗಿರುವ ಗುಜರಾತ್, ಇದೀಗ ಎರಡನೇ ಐಪಿಎಲ್ ಪ್ರಶಸ್ತಿ ಗೆಲ್ಲುವ ಹೊಸ್ತಿಲಲ್ಲಿದೆ. 2022ರಲ್ಲಿ ತನ್ನ ಚೊಚ್ಚಲ ಟ್ರೋಫಿ ಗೆದ್ದಿತ್ತು.
ಈ ವರ್ಷದ ಐಪಿಎಲ್ನಲ್ಲಿ ಕಳಪೆ ಆರಂಭ ಪಡೆದಿದ್ದ ಗುಜರಾತ್ ತಂಡವು ದ್ವೀತೀಯಾರ್ಧದಲ್ಲಿ ಪ್ರಾಬಲ್ಯ ಸಾಧಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.
ಐಪಿಎಲ್-2026ರ ಮೊದಲ ಹಂತದಲ್ಲಿ ಆರಂಭಿಕ ಏಳು ಪಂದ್ಯಗಳಲ್ಲಿ ಗುಜರಾತ್ ತಂಡ ಕೇವಲ ಮೂರರಲ್ಲಿ ಜಯ ಸಾಧಿಸಿ, ನಾಲ್ಕರಲ್ಲಿ ಸೋತಿತ್ತು. ಪಂಜಾಬ್ ಕಿಂಗ್ಸ್ ವಿರುದ್ಧ ಸೋಲಿನೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಿತ್ತು. ಬೆಂಗಳೂರಿನಲ್ಲಿ ಆರ್ಸಿಬಿ ವಿರುದ್ಧ ಸೋತ ನಂತರ ಗುಜರಾತ್ನ ಅದೃಷ್ಟ ಬದಲಾಯಿತು. ಆ ನಂತರ ಹಿಂತಿರುಗಿ ನೋಡದ ಗುಜರಾತ್ ತಂಡವು ಸತತ ಐದು ಪಂದ್ಯಗಳಲ್ಲಿ ಜಯ ಗಳಿಸಿತು. ಲೀಗ್ ಹಂತದಲ್ಲಿ 14 ಪಂದ್ಯಗಳ ಪೈಕಿ 9ರಲ್ಲಿ ಜಯ ಕಂಡಿತು.
ಮೊದಲ ಕ್ವಾಲಿಫೈಯರ್ನಲ್ಲಿ ಆರ್ಸಿಬಿಗೆ ಗುಜರಾತ್ ತಂಡವು 254 ರನ್ ಬಿಟ್ಟುಕೊಟ್ಟಿತ್ತು. ರನ್ ಚೇಸ್ ವೇಳೆ 51 ರನ್ಗೆ ಐದು ವಿಕೆಟ್ಗಳನ್ನು ಕಳೆದುಕೊಂಡು ಅಂತಿಮವಾಗಿ 54 ರನ್ಗಳಿಂದ ಸೋಲುಂಡಿತು.
ಎರಡನೇ ಕ್ವಾಲಿಫೈಯರ್ನಲ್ಲಿ ಪುಟಿದೆದ್ದ ಗುಜರಾತ್ ತಂಡವು ರಾಜಸ್ಥಾನ ತಂಡ ನೀಡಿದ್ದ 215 ರನ್ ಗುರಿಯನ್ನು ಇನ್ನೂ ಎಂಟು ಎಸೆತ ಬಾಕಿ ಇರುವಾಗಲೇ ಚೇಸ್ ಮಾಡಿತು.
ಗುಜರಾತ್ ತಂಡದ ಯಶಸ್ಸಿಗೆ ಆರಂಭಿಕ ಜೋಡಿಯಾದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಮಹತ್ವದ ಕೊಡುಗೆ ನೀಡಿದ್ದಾರೆ. ರಾಜಸ್ಥಾನ ವಿರುದ್ಧ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಈ ಜೋಡಿಯು ಮೊದಲ ವಿಕೆಟಿಗೆ 167 ರನ್ ಸೇರಿಸಿ 215 ರನ್ ಗುರಿಯನ್ನು ಸುಲಭಗೊಳಿಸಿತು. ಗಿಲ್ 53 ಎಸೆತಗಳಲ್ಲಿ 104 ರನ್ ಹಾಗೂ ಸುದರ್ಶನ್ ಕೇವಲ 32 ಎಸೆತಗಳಲ್ಲಿ 58 ರನ್ ಗಳಿಸಿದರು.
ಗಿಲ್-ಸುದರ್ಶನ್ ಈ ವರ್ಷ ಒಟ್ಟು 700ಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ. ಒಟ್ಟು 722 ರನ್ ಗಳಿಸಿರುವ ಗಿಲ್ ಆರೆಂಜ್ ಕ್ಯಾಪ್ ರೇಸ್ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸಾಯಿ ಸುದರ್ಶನ್ 710 ರನ್ ಗಳಿಸಿ ತೀವ್ರ ಪೈಪೋಟಿ ನೀಡುತ್ತಿದ್ದಾರೆ.
ಗುಜರಾತ್ ತಂಡದ ಬೌಲಿಂಗ್ ವಿಭಾಗದಲ್ಲಿ ಕಾಗಿಸೊ ರಬಾಡ ಹಾಗೂ ಮುಹಮ್ಮದ್ ಸಿರಾಜ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರಬಾಡ ಅವರು ಪವರ್ಪ್ಲೇನಲ್ಲಿ 18 ಸಹಿತ ಒಟ್ಟು 28 ವಿಕೆಟ್ಗಳನ್ನು ಪಡೆದಿದ್ದಾರೆ. ಸಿರಾಜ್ ಒಟ್ಟು 17 ವಿಕೆಟ್ಗಳನ್ನು ಉರುಳಿಸಿದ್ದಾರೆ. ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಡಾಟ್ಬಾಲ್ ಎಸೆದಿದ್ದಾರೆ. ಈ ಇಬ್ಬರು ಒಟ್ಟಿಗೆ 31 ವಿಕೆಟ್ಗಳನ್ನು ಪಡೆದು ಎದುರಾಳಿಯ ಅಗ್ರ ಸರದಿಗೆ ಸವಾಲಾಗಿದ್ದಾರೆ.
ಗುಜರಾತ್ ಟೈಟಾನ್ಸ್ ಟಾಪ್-5 ಬ್ಯಾಟರ್ಗಳು
1.ಶುಭಮನ್ ಗಿಲ್ 722 ರನ್ 15 ಇನಿಂಗ್ಸ್
2. ಸಾಯಿ ಸುದರ್ಶನ್ 710 ರನ್ 16 ಇನಿಂಗ್ಸ್
3. ಜೋಸ್ ಬಟ್ಲರ್ 507 ರನ್ 16 ಇನಿಂಗ್ಸ್
4.ಸುಂದರ್ 327 ರನ್ 16 ಇನಿಂಗ್ಸ್
5. ರಾಹುಲ್ ಟಿವಾಟಿಯ 183 ರನ್ 15 ಇನಿಂಗ್ಸ್
ಗುಜರಾತ್ ಟೈಟಾನ್ಸ್ ಟಾಪ್-5 ಬೌಲರ್ಗಳು
1.ಕಾಗಿಸೊ ರಬಾಡ 28 ವಿಕೆಟ್ 16 ಪಂದ್ಯಗಳು
2.ರಶೀದ್ ಖಾನ್ 19 ವಿಕೆಟ್ 16 ಪಂದ್ಯಗಳು
3. ಮುಹಮ್ಮದ್ ಸಿರಾಜ್ 18 ವಿಕೆಟ್ 16 ಪಂದ್ಯಗಳು
4. ಜೇಸನ್ ಹೋಲ್ಡರ್ 17 ವಿಕೆಟ್ 10 ಪಂದ್ಯಗಳು
5.ಪ್ರಸಿದ್ದ ಕೃಷ್ಣ 16 ವಿಕೆಟ್ 11 ಪಂದ್ಯಗಳು
ಆರ್ಸಿಬಿಯ ಟಾಪ್-5 ಬ್ಯಾಟರ್ಗಳು
ವಿರಾಟ್ ಕೊಹ್ಲಿ: ಪಂದ್ಯ 15, ರನ್ 600, ಸರಾಸರಿ 50.00
ರಜತ್ ಪಾಟಿದಾರ್: ಪಂದ್ಯ 14, ರನ್ 486, ಸರಾಸರಿ 44.18
ದೇವದತ್ತ ಪಡಿಕ್ಕಲ್: ಪಂದ್ಯ 14, ರನ್ 463, ಸರಾಸರಿ 35.62
ಟಿಮ್ ಡೇವಿಡ್: ಪಂದ್ಯ 15, ರನ್ 281, ಸರಾಸರಿ 35.13
ಕೃನಾಲ್ ಪಾಂಡ್ಯ: ಪಂದ್ಯ 15, ರನ್ 225, ಸರಾಸರಿ 45.00
ಟಾಪ್-5 ಬೌಲರ್ಗಳು
ಭುವನೇಶ್ವರ ಕುಮಾರ್: ಪಂದ್ಯ 15, ವಿಕೆಟ್ 26, ಬೆಸ್ಟ್ 4/23
ರಾಸಿಕ್ ದರ್: ಪಂದ್ಯ 11, ವಿಕೆಟ್ 16, ಬೆಸ್ಟ್ 4/24
ಕೃನಾಲ್ ಪಾಂಡ್ಯ: ಪಂದ್ಯ 15, ವಿಕೆಟ್ 13, ಬೆಸ್ಟ್ 2/16
ಹೇಝಲ್ವುಡ್:ಪಂದ್ಯ 12, ವಿಕೆಟ್ 13, ಬೆಸ್ಟ್ 4/12
ಸುಯಶ್ ಶರ್ಮಾ: ಪಂದ್ಯ 12, ವಿಕೆಟ್ 9, ಬೆಸ್ಟ್ 2/47






