ಆರ್ಸಿಬಿಯ ತವರು ಪಂದ್ಯಗಳು ಪುಣೆಗೆ ಸ್ಥಳಾಂತರ?

Photo Credit : PTI
ಬೆಂಗಳೂರು, ನ. 12: 2026ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ತನ್ನೆಲ್ಲಾ ತವರು ಪಂದ್ಯಗಳನ್ನು ಪುಣೆಯಲ್ಲಿ ಆಡುವ ಸಾಧ್ಯತೆಯಿದೆ.
ಜೂನ್ 4ರಂದು ಆರ್ಸಿಬಿಯ ವಿಜಯ ಯಾತ್ರೆಯ ವೇಳೆ ನಡೆದ ಭೀಕರ ಕಾಲ್ತುಳಿತದಲ್ಲಿ 12 ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಈಗ ಅಮಾನತಿನಲ್ಲಿದೆ. ಹಾಗಾಗಿ, ಅಲ್ಲಿ ಪಂದ್ಯಗಳು ನಡೆಯುವುದಿಲ್ಲ.
ಕಾಲ್ತುಳಿತ ಘಟನೆಯ ಬಳಿಕ ಈ ಮೈದಾನದಲ್ಲಿ ಪಂದ್ಯಗಳನ್ನು ನಡೆಸಲು ಅಧಿಕಾರಿಗಳು ಅನುಮೋದನೆ ನೀಡಿಲ್ಲ. ಹಾಗಾಗಿ, 2026ರಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ನ ಪಂದ್ಯಗಳಿಗಾಗಿಯೂ ಚಿನ್ನಸ್ವಾಮಿ ಸ್ಟೇಡಿಯಂಯನ್ನು ಪರಿಗಣಿಸಲಾಗಿಲ್ಲ.
‘‘ಚಿನ್ನಾಸ್ವಾಮಿ ಕ್ರೀಡಾಂಗಣಕ್ಕೆ ಸಂಬಂಧಿಸಿ ಹಲವಾರು ಅನಿಶ್ಚಿತತೆಗಳಿವೆ. ಅದು ತನ್ನ ವಿನ್ಯಾಸವನ್ನು ಮರುಪರಿಶೀಲಿಸಬೇಕಾಗಿದೆ. ಸರಕಾರಿ ಅಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ. ಹಾಗಾಗಿ ಈ ಮೈದಾನವನ್ನು ಪರಿಗಣಿಸಲಾಗಿಲ್ಲ’’ ಎಂದು ಐಸಿಸಿ ಮೂಲವೊಂದು ಹೇಳಿದೆ.
ಐಪಿಎಲ್ನಲ್ಲಿ ಪ್ರತಿ ವರ್ಷ ಎಮ್. ಚಿನ್ನಾಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿಯ ಏಳು ಲೀಗ್ ಪಂದ್ಯಗಳು ನಡೆಯುತ್ತವೆ. ಇದಕ್ಕೆ ಹೆಚ್ಚುವರಿಯಾಗಿ 2014 ಮತ್ತು 2016ರಲ್ಲಿ ಐಪಿಎಲ್ ಫೈನಲ್ ಕೂಡ ನಡೆದಿತ್ತು.
ಆರ್ಸಿಬಿಯ ತವರು ಪಂದ್ಯಗಳನ್ನು ಪುಣೆಯಲ್ಲಿ ನಡೆಸುವ ಬಗ್ಗೆ ಈಗ ಮಾತುಕತೆಗಳು ನಡೆಯುತ್ತಿವೆ ಎಂದು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ (ಎಮ್ಸಿಎ) ಕಾರ್ಯದರ್ಶಿ ಕಮಲೇಶ್ ಪಿಸಲ್ ಹೇಳಿದ್ದಾರೆ.
‘‘ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ, ಆದರೆ ಯಾವುದೂ ಅಂತಿಮಗೊಂಡಿಲ್ಲ. ಕಾಲ್ತುಳಿತ ಸಂಭವಿಸಿದ ಹಿನ್ನೆಲೆಯಲ್ಲಿ ಅವರಿಗೆ ಕರ್ನಾಟಕದಲ್ಲಿ ಸಮಸ್ಯೆಯಿದೆ. ಹಾಗಾಗಿ, ಅವರು ಮೈದಾನಕ್ಕಾಗಿ ಹುಡುಕಾಡುತ್ತಿದ್ದಾರೆ. ನಮ್ಮ ಸ್ಟೇಡಿಯಮನ್ನು ನಾವು ಅವರಿಗೆ ಕೊಡಲು ಮುಂದೆ ಬಂದಿದ್ದೇವೆ. ಪ್ರಾಥಮಿಕ ಮಾತುಕತೆಗಳು ನಡೆದಿವೆ ಮತ್ತು ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಬೇಕಾಗಿದೆ. ಎಲ್ಲವೂ ಸರಿಯಾಗಿ ನಡೆದರೆ ಆರ್ಸಿಬಿ ಪಂದ್ಯಗಳು ಪುಣೆಯಲ್ಲಿ ನಡೆಯುತ್ತವೆ’’ ಎಂದು ಅವರು ನುಡಿದರು.







