2027ರ ಐಪಿಎಲ್ ಆರಂಭಿಕ ಪಂದ್ಯದಿಂದ ಆರ್ಸಿಬಿ ಆಟಗಾರ ಟಿಮ್ ಡೇವಿಡ್ ಔಟ್!

Photo: x.com/NewsWireLK
ಹೊಸದಿಲ್ಲಿ: ಗುಜರಾತ್ ಟೈಟನ್ಸ್ ವಿರುದ್ಧದ ಐಪಿಎಲ್ ಫೈನಲ್ ಪಂದ್ಯದ ವೇಳೆ ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಂಪೈರ್ ನಿತಿನ್ ಮೆನನ್ ಅವರತ್ತ ಐಸ್ ಬ್ಯಾಗ್ ಎಸೆದ ಕಾರಣಕ್ಕಾಗಿ ಆರ್ಸಿಬಿ ಆಟಗಾರ ಟಿಮ್ ಡೇವಿಡ್ ಅವರನ್ನು ಒಂದು ಪಂದ್ಯಕ್ಕೆ ಅಮಾನತು ಮಾಡಲಾಗಿದೆ. ಆದ್ದರಿಂದ ಈ ಆಸ್ಟ್ರೇಲಿಯನ್ ಆಟಗಾರ 2027ರ ಐಪಿಎಲ್ ನ ಆರಂಭಿಕ ಪಂದ್ಯ ಕಳೆದುಕೊಳ್ಳಲಿದ್ದಾರೆ.
ಐಪಿಎಲ್ ಆಡಳಿತ ಮಂಡಳಿ ಸೋಮವಾರ ಡೇವಿಡ್ ಅವರ ಶಿಕ್ಷೆಯನ್ನು ಘೋಷಿಸಿದ್ದು, ಅಮಾನತು ಜತೆಗೆ ಪಂದ್ಯದ ಶುಲ್ಕದ ಶೇಕಡ 50ರಷ್ಟು ದಂಡ ವಿಧಿಸಲಾಗಿದೆ. ಜತೆಗೆ ಲೆವೆಲ್-1 ಅಪರಾಧಕ್ಕಾಗಿ ಎರಡು ಡಿಮೆರಿಟ್ ಪಾಯಿಂಟ್ ಘೋಷಿಸಲಾಗಿದೆ. ಐಪಿಎಲ್ ಮಾದರಿ ನೀತಿಸಂಹಿತೆಯ 2.9ನೇ ವಿಧಿಯನ್ನು ಉಲ್ಲಂಘಿಸಿದ್ದಕ್ಕಾಗಿ ಈ ಶಿಕ್ಷೆ ವಿಧಿಸಲಾಗಿದೆ. ಇದರ ಅನ್ವಯ ಪಂದ್ಯದ ವೇಳೆ ಚೆಂಡು ಅಥವಾ ಇತರ ಯಾವುದೇ ಕ್ರಿಕೆಟ್ ಪರಿಕರಗಳನ್ನು ಇತರ ಆಟಗಾರ, ತಂಡದ ಅಧಿಕಾರಿ, ಅಂಪೈರ್, ಪಂದ್ಯದ ರೆಫರಿ ಅಥವಾ ಯಾವುದೇ ವ್ಯಕ್ತಿಗೆ ಅಸಮರ್ಪಕವಾಗಿ ಅಥವಾ ಅಪಾಯಕಾರಿ ರೀತಿಯಲ್ಲಿ ಎಸೆಯುವುದಕ್ಕೆ ಶಿಕ್ಷೆ ವಿಧಿಸಲಾಗುತ್ತದೆ.
ಈ ಘಟನೆ ಪಂದ್ಯದ 10ನೇ ಓವರ್ ನಲ್ಲಿ ನಡೆದಿದೆ. ವಿಕೆಟ್ ಪತನವಾದ ಸಂದರ್ಭದಲ್ಲಿ ಡೇವಿಡ್ ಕೋಪದಿಂದ ಐಸ್ ಬ್ಯಾಗನ್ನು ರಭಸದಿಂದ ಅಂಪೈರ್ ನಿತಿನ್ ಮೆನನ್ ಅವರತ್ತ ಎಸೆದಿದ್ದರು ಎಂದು ಐಪಿಎಲ್ ಹೇಳಿದೆ. ಡೇವಿಡ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಪಂದ್ಯದ ರೆಫರಿ ಜಾವಗಲ್ ಶ್ರೀನಾಥ್ ಅವರು ವಿಧಿಸಿದ ನಿರ್ಬಂಧವನ್ನು ಒಪ್ಪಿಕೊಂಡಿದ್ದಾರೆ.
ಆರಂಭದಲ್ಲಿ ದಂಡ ಮತ್ತು ಎರಡು ಡಿಮೆರಿಟ್ ಪಾಯಿಂಟ್ ಗಳ ಶಿಕ್ಷೆ ವಿಧಿಸಲಾಗಿತ್ತು. ಆದರೆ ಪ್ರಸಕ್ತ ಸೀಸನ್ ನಲ್ಲಿ ಡೇವಿಡ್ ಮೂರನೇ ಬಾರಿಗೆ ಲೆವೆಲ್-1 ಅಪರಾಧ ಎಸಗಿದ ಕಾರಣಕ್ಕಾಗಿ ಹೆಚ್ಚಿನ ಶಿಕ್ಷೆ ವಿಧಿಸಲಾಗಿದೆ. 20ನೇ ಪಂದ್ಯದಲ್ಲಿ ಒಂದು ಹಾಗೂ 54ನೇ ಪಂದ್ಯದಲ್ಲಿ ಡೇವಿಡ್ ವಿರುದ್ಧ ಎರಡು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿತ್ತು. ಇದೀಗ ಒಟ್ಟು ಐದು ಡಿಮೆರಿಟ್ ಪಾಯಿಂಟ್ ವಿಧಿಸಲ್ಪಟ್ಟಿರುವುದರಿಂದ ಸಹಜವಾಗಿ ಐಪಿಎಲ್ ಶಿಸ್ತುಕ್ರಮ ನಿಬಂಧನೆಗಳ ಅನ್ವಯ ಒಂದು ಪಂದ್ಯ ಕಳೆದುಕೊಳ್ಳಬೇಕಾಗುತ್ತದೆ.
ಇದರಿಂದಾಗಿ 2027ರ ಐಪಿಎಲ್ ಪಂದ್ಯಾವಳಿಯಲ್ಲಿ ಆರ್ಸಿಬಿ ಆಡುವ ಮೊದಲ ಪಂದ್ಯವನ್ನು ಡೇವಿಡ್ ಕಳೆದುಕೊಳ್ಳಲಿದ್ದಾರೆ. ಮುಂದಿನ ಸೀಸನ್ ನಲ್ಲಿ ಅವರು ಬೇರೆ ಫ್ರಾಂಚೈಸಿ ತಂಡವನ್ನು ಪ್ರತಿನಿಧಿಸಿದರೆ, ಆ ತಂಡ ಆಡುವ ಮೊದಲ ಪಂದ್ಯದಿಂದ ಡೇವಿಡ್ ಹೊರಗುಳಿಯಬೇಕಾಗುತ್ತದೆ.






