ನಾಳೆ ಮೊದಲ ಕ್ವಾಲಿಫೈಯರ್ ಪಂದ್ಯ | ಫೈನಲ್ ತಲುಪಲು ಆರ್ಸಿಬಿ-ಪಂಜಾಬ್ ಕಿಂಗ್ಸ್ ಸೆಣಸಾಟ

ಸಾಂದರ್ಭಿಕ ಚಿತ್ರ | PC : PTI
ಮುಲ್ಲನ್ಪುರ: ಲಕ್ನೊದಲ್ಲಿ ನಡೆದಿದ್ದ 2025ರ ಆವೃತ್ತಿಯ ಐಪಿಎಲ್ ನ ಕೊನೆಯ ಲೀಗ್ ಪಂದ್ಯದಲ್ಲಿ ಲಕ್ನೊ ಸೂಪರ್ ಜಯಂಟ್ಸ್ ತಂಡವನ್ನು 6 ವಿಕೆಟ್ ಗಳ ಅಂತರದಿಂದ ಮಣಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಕ್ವಾಲಿಫೈಯರ್ ಪಂದ್ಯ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದು, ಗುರುವಾರ ನಡೆಯಲಿರುವ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸಲಿದೆ.
ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮೇ 30ರಂದು ಎಲಿಮಿನೇಟರ್ ಪಂದ್ಯವನ್ನು ಆಡಲಿವೆ.
ವಿರಾಟ್ ಕೊಹ್ಲಿ ಹಾಗೂ ಹಂಗಾಮಿ ನಾಯಕ ಜಿತೇಶ್ ಶರ್ಮಾ ಗಳಿಸಿದ ಅರ್ಧಶತಕಗಳ ನೆರವಿನಿಂದ ಆರ್ಸಿಬಿ 228 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಅಗ್ರ-2ರಲ್ಲಿ ಸ್ಥಾನ ಪಡೆಯುವ ಮೂಲಕ ಆರ್ಸಿಬಿ ತಂಡವು 2011 ಹಾಗೂ 2016ರ ನಂತರ 3ನೇ ಬಾರಿ ಐಪಿಎಲ್ ಟೂರ್ನಿಯಲ್ಲಿ ಮೊದಲ ಕ್ವಾಲಿಫೈಯರ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ಆರ್ ಸಿ ಬಿ ಹಾಗೂ ಪಂಜಾಬ್ ತಂಡಗಳು ಮಳೆಯಿಂದಾಗಿ ತಲಾ ಒಂದು ಪಂದ್ಯವನ್ನು ಆಡಿರಲಿಲ್ಲ. ಹೀಗಾಗಿ ತಲಾ 19 ಅಂಕಗಳನ್ನು ಸಂಪಾದಿಸಿವೆ. ಪಂಜಾಬ್ ಉತ್ತಮ ರನ್ರೇಟ್ ಹೊಂದಿರುವ ಕಾರಣ ಅಂಕಪಟ್ಟಿಯಲ್ಲಿ ಆರ್ಸಿಬಿಯನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದೆ. ಪಂಜಾಬ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಅಗ್ರ-2ರಲ್ಲಿ ತನ್ನ ಸ್ಥಾನ ದೃಢಪಡಿಸಿತ್ತು.
ಆರ್ಸಿಬಿ ತಂಡವು ಐಪಿಎಲ್ ಇತಿಹಾಸದಲ್ಲಿ 3ನೇ ಗರಿಷ್ಠ ರನ್ ಚೇಸ್ ಮಾಡಿದೆ. ತವರು ಮೈದಾನದಿಂದ ಹೊರಗೆ ಆಡಿರುವ ಎಲ್ಲ 7 ಪಂದ್ಯಗಳನ್ನು ಗೆದ್ದಿರುವ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಗಿದೆ.
ಆರ್ಸಿಬಿಗೆ ಪಂಜಾಬ್ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದ ತಯಾರಿಗೆ ಕೇವಲ ಒಂದು ದಿನ ಲಭಿಸಿದೆ.
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸದ್ಯ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಈ ವರ್ಷದ ಐಪಿಎಲ್ ನಲ್ಲಿ 8 ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಈ ಎಲ್ಲ ಪಂದ್ಯದಲ್ಲೂ ಆರ್ಸಿಬಿ ಜಯ ದಾಖಲಿಸಿದೆ. ಕೊಹ್ಲಿ ಈ ವರ್ಷವೂ ಸೇರಿದಂತೆ ಒಟ್ಟು 5 ಐಪಿಎಲ್ ನಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ್ದಾರೆ. 4 ಬಾರಿ ಈ ಸಾಧನೆ ಮಾಡಿದ ಕೆ.ಎಲ್.ರಾಹುಲ್ ದಾಖಲೆಯನ್ನು ಪುಡಿಗಟ್ಟಿದ್ದಾರೆ.
ಕೊಹ್ಲಿ ಈ ವರ್ಷ 13 ಇನಿಂಗ್ಸ್ಗಳಲ್ಲಿ 60.20ರ ಸರಾಸರಿಯಲ್ಲಿ ಒಟ್ಟು 602 ರನ್ ಗಳಿಸಿದ್ದು, ಇದರಲ್ಲಿ 8 ಅರ್ಧಶತಕಗಳಿವೆ.
ಕೊಹ್ಲಿ ಅವರು ಆರ್ಸಿಬಿ ಪರ ಎಲ್ಲ ಟಿ-20 ಪಂದ್ಯಗಳಲ್ಲಿ ಒಟ್ಟು 9,030 ರನ್ ಗಳಿಸಿದ್ದಾರೆ. ಟಿ20 ಮಾದರಿಯಲ್ಲಿ ಒಂದೇ ತಂಡದ ಪರ 9 ಸಾವಿರಕ್ಕೂ ಅಧಿಕ ರನ್ ಗಳಿಸಿದ ಮೊದಲ ಆಟಗಾರನಾಗಿದ್ದಾರೆ.
ಆರ್ಸಿಬಿ ಹಾಗೂ ಪಂಜಾಬ್ ಈ ಹಿಂದೆ ಲೀಗ್ ಹಂತದ ಅಂತ್ಯಕ್ಕೆ ಎರಡು ಬಾರಿ ಮಾತ್ರ ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆದಿದ್ದವು. ಗುರುವಾರ ನಡೆಯಲಿರುವ ಪಂದ್ಯದಲ್ಲಿ ಸೋಲುವ ತಂಡವು ಮತ್ತೊಂದು ಅವಕಾಶ ಪಡೆಯಲಿದೆ.
ಆರ್ಸಿಬಿ ತಂಡವು ಕಳೆದ 3 ಪಂದ್ಯಗಳಲ್ಲಿ 200ಕ್ಕೂ ಅಧಿಕ ರನ್(211,231,227 ರನ್) ಬಿಟ್ಟುಕೊಟ್ಟಿದ್ದು, ಬೌಲಿಂಗ್ ವಿಭಾಗದ ಪ್ರದರ್ಶನ ಕಳವಳಕಾರಿಯಾಗಿದೆ. ಭುಜನೋವಿನಿಂದಾಗಿ ಜೋಶ್ ಹೇಝಲ್ ವುಡ್ ಕಳೆದ 3 ಪಂದ್ಯಗಳಲ್ಲಿ ಲಭ್ಯವಿರಲಿಲ್ಲ. ಹೇಝಲ್ವುಡ್ ಈ ವರ್ಷ 10 ಪಂದ್ಯಗಳಲ್ಲಿ ಒಟ್ಟು 18 ವಿಕೆಟ್ ಗಳನ್ನು ಪಡೆದಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಅವರು ಅದೇ ಲಯ ಕಾಯ್ದುಕೊಳ್ಳುತ್ತಾರೆಯೇ ಎಂದು ನೋಡಬೇಕಾಗಿದೆ. ಆಸ್ಟ್ರೇಲಿಯದ ವೇಗಿ ಪ್ಲೇ ಆಫ್ಗೆ ಲಭ್ಯವಿರಲಿದ್ದಾರೆ ಎಂದು ಹಂಗಾಮಿ ನಾಯಕ ಜಿತೇಶ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟಿಮ್ ಡೇವಿಡ್ ಮಂಡಿರಜ್ಜು ನೋವಿನಿಂದ ಬಳಲುತ್ತಿದ್ದಾರೆ.
ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡದಲ್ಲಿ ಮಾರ್ಕೊ ಜಾನ್ಸನ್ ಅನುಪಸ್ಥಿತಿ ಎದ್ದುಕಾಣುತ್ತಿದೆ. ಶ್ರೇಯಸ್ ಅಯ್ಯರ್ ಅವರು ಪಂಜಾಬ್ ತಂಡವು 2014ರ ನಂತರ ಮೊದಲ ಬಾರಿ ಪ್ಲೇ ಆಫ್ ತಲುಪುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಪಂಜಾಬ್ ಟೂರ್ನಿಯ ಲೀಗ್ ಹಂತದಲ್ಲಿ ಆಡಿರುವ 14 ಪಂದ್ಯಗಳ ಪೈಕಿ ಕೇವಲ 4ರಲ್ಲಿ ಸೋಲು, 9ರಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯ ಮಳೆಗಾಹುತಿಯಾಗಿದೆ. ಇತ್ತೀಚೆಗೆ ಜೈಪುರದಲ್ಲಿ ಮುಂಬೈ ತಂಡವನ್ನು 7 ವಿಕೆಟ್ ಗಳಿಂದ ಸುಲಭವಾಗಿ ಸೋಲಿಸಿ ಕ್ವಾಲಿಫೈಯರ್-1ಕ್ಕೆ ಅರ್ಹತೆ ಪಡೆದಿತ್ತು.
ಇದೇ ವೇಳೆ, ಆರ್ಸಿಬಿ ತಂಡವು 2016ರ ನಂತರ ಮೊದಲ ಬಾರಿ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿದೆ.ಪಂಜಾಬ್ನಂತರ 2ನೇ ಸ್ಥಾನ ಪಡೆದಿದೆ. ರಜತ್ ಪಾಟಿದಾರ್ ಬಳಗವು ಲೀಗ್ ಹಂತದಲ್ಲಿ ಪಂಜಾಬ್ನಷ್ಟೇ ಪಂದ್ಯವನ್ನು ಗೆದ್ದಿದೆ ಹಾಗೂ ಸೋತಿದೆ. ಆದರೆ ರನ್ ರೇಟ್ ಮಾತ್ರ ಪಂಜಾಬ್ ಗಿಂತ ಕಡಿಮೆ ಇದೆ.
ಉಭಯ ತಂಡಗಳು ಈ ಬಾರಿ ಲೀಗ್ ಹಂತದಲ್ಲಿ 2 ಬಾರಿ ಮುಖಾಮುಖಿಯಾಗಿವೆ. ಪಂಜಾಬ್ ತಂಡ ಬೆಂಗಳೂರಿನಲ್ಲಿ ಜಯ ಸಾಧಿಸಿದರೆ, ಮುಲ್ಲನ್ಪುರದಲ್ಲಿ ಪಂಜಾಬ್ ತಂಡವನ್ನು ಮಣಿಸಿದ್ದ ಆರ್ಸಿಬಿ ತಂಡ ಸೇಡು ತೀರಿಸಿಕೊಂಡಿದೆ.
►ಪಿಚ್ ರಿಪೋರ್ಟ್
ಮುಲ್ಲನ್ಪುರವು ಈ ತನಕ 9 ಐಪಿಎಲ್ ಪಂದ್ಯಗಳನ್ನು ಆಯೋಜಿಸಿದೆ. ಮೊದಲ ಇನಿಂಗ್ಸ್ ನ ಸರಾಸರಿ ಸ್ಕೋರ್ 174. ಮೊದಲು ಬ್ಯಾಟಿಂಗ್ ಮಾಡಿದ್ದ ತಂಡವು 5 ಪಂದ್ಯಗಳನ್ನು ಗೆದ್ದಿದೆ. ಈ ವರ್ಷದ ಐಪಿಎಲ್ ನಲ್ಲಿ 4 ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟಿಂಗ್ ಮಾಡಿದ್ದ 3 ತಂಡಗಳು ಜಯ ದಾಖಲಿಸಿವೆ.
►ಸಂಭಾವ್ಯ ತಂಡಗಳು
►ಆರ್ಸಿಬಿ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್, ನಾಯಕ), ಟಿಮ್ ಡೇವಿಡ್/ಟಿಮ್ ಸೆಫರ್ಟ್, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ ಕುಮಾರ್, ಜೋಶ್ ಹೇಝಲ್ವುಡ್/ನುವಾನ್ ತುಷಾರ, ಸುಯಶ್ ಶರ್ಮಾ, ಯಶ್ ದಯಾಳ್.
►ಇಂಪ್ಯಾಕ್ಟ್ ಪ್ಲೇಯರ್: ರಜತ್ ಪಾಟಿದಾರ್.
►ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ನೇಹಾಲ್ ವಧೀರ, ಶ್ರೇಯಸ್ ಅಯ್ಯರ್(ನಾಯಕ), ಶಶಾಂಕ್ ಸಿಂಗ್, ಜೋಶ್ ಇಂಗ್ಲಿಸ್(ವಿಕೆಟ್ ಕೀಪರ್), ಮಾರ್ಕಸ್ ಸ್ಟೋಯಿನಿಸ್, ಮಾರ್ಕೊ ಜಾನ್ಸನ್, ಹರ್ಪ್ರೀತ್ ಬ್ರಾರ್, ಜಮೀಸನ್, ಅರ್ಷದೀಪ್ ಸಿಂಗ್, ವಿಜಯಕುಮಾರ್ ವೈಶಾಕ್.
►ಇಂಪ್ಯಾಕ್ಟ್ ಪ್ಲೇಯರ್: ಪ್ರಭ್ ಸಿಮ್ರನ್ ಸಿಂಗ್.







