ʼಜೀತ್ʼ ಗಯಾ ಆರ್ ಸಿ ಬಿ
ಪಂತ್ ಶತಕ ವ್ಯರ್ಥ; ಎಲ್ ಎಸ್ ಜಿ ಗೆ ಸೋಲು

Photo: x@mufaddal_vohra
ಲಕ್ನೋ: ಇಲ್ಲಿನ ಏಕನಾ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರೋಚಕ ಜಯ ಗಳಿಸಿದೆ.
ನಾಯಕ ಜಿತೇಶ್ ಶರ್ಮಾ(ಔಟಾಗದೆ 85, 33 ಎಸೆತ, 8 ಬೌಂಡರಿ, 6 ಸಿಕ್ಸರ್), ವಿರಾಟ್ ಕೊಹ್ಲಿ(54 ರನ್, 30 ಎಸೆತ, 10 ಬೌಂಡರಿ) ಹಾಗೂ ಮಯಾಂಕ್ ಅಗರ್ವಾಲ್(ಔಟಾಗದೆ 41, 23 ಎಸೆತ, 5 ಬೌಂಡರಿ)ಸಾಹಸದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೊ ಸೂಪರ್ ಜಯಂಟ್ಸ್ ತಂಡವನ್ನು ಐಪಿಎಲ್ ನ 70ನೇ ಹಾಗೂ ಕೊನೆಯ ಲೀಗ್ ಪಂದ್ಯದಲ್ಲಿ 6 ವಿಕೆಟ್ಗಳ ಅಂತರದಿಂದ ಮಣಿಸಿದೆ.
ಈ ಗೆಲುವಿನೊಂದಿಗೆ ಆರ್ಸಿಬಿ ಒಟ್ಟು 19 ಅಂಕಗಳಿಸಿ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆದಿದೆ. ಮೇ 29ರಂದು ಮುಲ್ಲನ್ಪುರದಲ್ಲಿ ನಡೆಯುವ ಮೊದಲ ಕ್ವಾಲಿಫೈಯರ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಮಂಗಳವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಲಕ್ನೊ ತಂಡವು ನಾಯಕ ರಿಷಭ್ ಪಂತ್ ಶತಕ(ಔಟಾಗದೆ 118, 61 ಎಸೆತ, 11 ಬೌಂಡರಿ, 8 ಸಿಕ್ಸರ್)ಹಾಗೂ ಮಿಚೆಲ್ ಮಾರ್ಷ್(67 ರನ್, 37 ಎಸೆತ, 4 ಬೌಂಡರಿ, 5 ಸಿಕ್ಸರ್)ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 227 ರನ್ ಗಳಿಸಿದೆ.
ಗೆಲ್ಲಲು 228 ರನ್ ಗುರಿ ಬೆನ್ನಟ್ಟಿದ ಆರ್ಸಿಬಿ 18.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಮೊದಲ ವಿಕೆಟ್ಗೆ 61 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ರಜತ್ ಪಾಟಿದಾರ್(14 ರನ್) ಹಾಗೂ ಲಿವಿಂಗ್ಸ್ಟೋನ್(0) ಬೆನ್ನುಬೆನ್ನಿಗೆ ಔಟಾದರು. ಆಗ ಕೊಹ್ಲಿ ಹಾಗೂ ಮಯಾಂಕ್ 4ನೇ ವಿಕೆಟ್ಗೆ 33 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಕೊಹ್ಲಿ ಔಟಾದ ನಂತರ ಜೊತೆಯಾದ ಜಿತೇಶ್ ಶರ್ಮಾ ಹಾಗೂ ಮಯಾಂಕ್ 5ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 45 ಎಸೆತಗಳಲ್ಲಿ 107 ರನ್ ಜೊತೆಯಾಟ ನಡೆೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಲಕ್ನೊದ ಆರಂಭಿಕ ಆಟಗಾರ ಮ್ಯಾಥ್ಯೂ ಬ್ರೀಝ್ಕೆ(14 ರನ್)ಬೇಗನೆ ಔಟಾದರು. ಆಗ ಪಂತ್ ಅವರು ಮಿಚೆಲ್ ಮಾರ್ಷ್(67 ರನ್, 37 ಎಸೆತ)ಅವರೊಂದಿಗೆ 2ನೇ ವಿಕೆಟ್ಗೆ 152 ರನ್ ಜೊತೆಯಾಟ ನಡೆಸಿ ಆರ್ಸಿಬಿ ಬೌಲರ್ಗಳನ್ನು ಬೆಂಡೆತ್ತಿದರು.
ಆರ್ಸಿಬಿ ಪರ ನುವಾನ್ ತುಷಾರ(1-26), ಭುವನೇಶ್ವರ ಕುಮಾರ(1-46)ಹಾಗೂ ಶೆಫರ್ಡ್(1-51)ತಲಾ ಒಂದು ವಿಕೆಟ್ ಪಡೆದರು.







