IPL 2026 | ʼರಜತೋʼತ್ಸವದ ಮುಂದೆ ಹೀನಾಯವಾಗಿ ಸೋತ ಟೈಟಾನ್ಸ್; ಸತತ 2ನೇ ಬಾರಿ ಫೈನಲ್ ಗೇರಿದ RCB

Photo : x@RCBTweets
ಧರ್ಮಶಾಲಾ: ಐಪಿಎಲ್–2026ರ ಕ್ವಾಲಿಫೈಯರ್–1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬಿರುಸಿನ ಬ್ಯಾಟಿಂಗ್ ಹಾಗೂ ಶಿಸ್ತುಬದ್ಧ ಬೌಲಿಂಗ್ ಎದುರು ಗುಜರಾತ್ ಟೈಟಾನ್ಸ್ (GT) ತಂಡ ಹೀನಾಯವಾಗಿ ಸೋತಿತು. ಆ ಮೂಲಕ RCB ತಂಡ ಸತತ ಎರಡನೇ ಬಾರಿ ಫೈನಲ್ ಪ್ರವೇಶಿಸಿತು.
ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ 255 ರನ್ಗಳ ಕಠಿಣ ಗುರಿ ಬೆನ್ನಟ್ಟಿದ GT, 19.3 ಓವರ್ಗಳಲ್ಲಿ 162 ರನ್ ಗಳಿಸಿ ಆಲೌಟ್ ಆಯಿತು. ಆರಂಭಿಕ ಆಟಗಾರ ಸಾಯಿ ಸುದರ್ಶನ್ ಹಿಟ್–ವಿಕೆಟ್ ಆಗಿ ನಿರ್ಗಮಿಸಿದರೆ, ನಾಯಕ ಶುಭ್ಮನ್ ಗಿಲ್ ಕೂಡ ದೊಡ್ಡ ಮೊತ್ತ ಗಳಿಸಲು ವಿಫಲರಾದರು. RCB ಬೌಲರ್ಗಳ ದಾಳಿಗೆ GTಯ ಬ್ಯಾಟಿಂಗ್ ಸರದಿ ಸಂಪೂರ್ಣ ಕುಸಿಯಿತು.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ RCB, ನಾಯಕ ರಜತ್ ಪಾಟಿದಾರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿತು. ಪಾಟಿದಾರ್ ಕೇವಲ 33 ಎಸೆತಗಳಲ್ಲಿ 93 ರನ್ ಸಿಡಿಸಿ ಎದುರಾಳಿ ಬೌಲರ್ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಮೆರೆದರು.
ವಿರಾಟ್ ಕೊಹ್ಲಿ 43 ರನ್ ಹಾಗೂ ಕೃನಾಲ್ ಪಾಂಡ್ಯ 43 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಬಲ ತುಂಬಿದರು. ಈ ಮೂಲಕ RCB, ಐಪಿಎಲ್ ಪ್ಲೇಆಫ್ ಇತಿಹಾಸದಲ್ಲೇ ಅತ್ಯಧಿಕ ತಂಡದ ಮೊತ್ತ ದಾಖಲಿಸಿದ ಸಾಧನೆ ಮಾಡಿತು.
ಇನ್ನೊಂದೆಡೆ, ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಸತತ ನಾಲ್ಕು ಋತುಗಳಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ಅಪೂರ್ವ ದಾಖಲೆ ನಿರ್ಮಿಸಿದರು.






