ಪಾಕ್ ಕ್ರಿಕೆಟ್ನಲ್ಲಿ ಬಂಡಾಯ: ಹಿಂಬಡ್ತಿ ಬಳಿಕ ಗುತ್ತಿಗೆಗೆ ಸಹಿ ಮಾಡಲು ರಿಝ್ವಾನ್ ನಕಾರ

PC:x.com/CricketNDTV
ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮತ್ತೆ ವಿವಾದದ ಅಲೆಯಲ್ಲಿ ಸಿಲುಕಿಕೊಂಡಿದ್ದು, ಭರವಸೆಯ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಮೊಹ್ಮದ್ ರಿಝ್ವಾನ್ ಅವರು ಹಿಂಬಡ್ತಿ ಬಳಿಕ ಸಿಪಿಬಿಯ ಕೇಂದ್ರೀಯ ಗುತ್ತಿಗೆಗೆ ಸಹಿ ಮಾಡಲು ನಿರಾಕರಿಸಿದ್ದಾರೆ. ಎ ವರ್ಗದಲ್ಲಿದ್ದ ರಿಝ್ವಾನ್ ಅವರಿಗೆ ಹಿಂಬಡ್ತಿ ನೀಡಿ ಬಿ ವರ್ಗದಲ್ಲಿ ಸೇರಿಸಲಾಗಿತ್ತು.
ಗುತ್ತಿಗೆಗೆ ಸಹಿ ಮಾಡಬೇಕಿದ್ದ 30 ಆಟಗಾರರ ಪೈಕಿ ರಿಝ್ವಾನ್ ಒಬ್ಬರು ಮಾತ್ರ ಸಹಿ ಮಾಡಿಲ್ಲ ಎಂದು ವರದಿಯಾಗಿದೆ. ಪ್ರಮುಖ ಪುನರ್ರಚನೆಯಲ್ಲಿ ಪಿಸಿಬಿ, ಹಿರಿಯ ಆಟಗಾರರಾದ ಬಾಬರ್ ಅಜಂ, ಶಹೀನ್ ಶಾ ಅಫ್ರೀದಿ ಹಾಗೂ ರಿಝ್ವಾನ್ ಅವರಿಗೆ ಮೀಸಲಿದ್ದ ಎಲೈಟ್ ಎ ವರ್ಗವನ್ನು ಕೈಬಿಟ್ಟಿದೆ. ಕಳೆದ ಒಂದು ವರ್ಷದಲ್ಲಿ ರಾಷ್ಟ್ರೀಯ ತಂಡದ ಸಾಧನೆಯ ಬಗ್ಗೆ ಪಿಸಿಬಿ ತೃಪ್ತಿ ಹೊಂದಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಹೊಸ ವ್ಯವಸ್ಥೆಯಡಿ ಮೂವರು ಹಿರಿಯ ಆಟಗಾರರು ಸೇರಿದಂತೆ 10 ಆಟಗಾರರು ಬಿ ವರ್ಗದಲ್ಲಿದ್ದಾರೆ. ಆದರೆ ಈ ವರ್ಗದಲ್ಲಿ ತಾವು ಸಹಿ ಮಾಡುವುದಿಲ್ಲ ಎಂಬ ತಮ್ಮ ನಿರ್ಧಾರವನ್ನು ರಿಝ್ವಾನ್ ಮಂಡಳಿಯ ಬಳಿ ಸ್ಪಷ್ಟಪಡಿಸಿದ್ದಾರೆ. ಹಿಂಬಡ್ತಿ ಬಗ್ಗೆ ಅಸಮಾಧಾನ ಹೊಂದಿರುವ ಅವರು ಏಕದಿನ ತಂಡದ ನಾಯಕತ್ವ ಕಿತ್ತುಹಾಕಿರುವ ಬಗ್ಗೆಯೂ ಅಸಂತುಷ್ಟರಾಗಿದ್ದಾರೆ ಎಂದು ಹೇಳಲಾಗಿದೆ.
ಪುನಃ ಎ ವರ್ಗಕ್ಕೆ ತಮ್ಮನ್ನು ಸೇರಿಸಬೇಕು ಹಾಗೂ ಯಾರನ್ನೇ ನಾಯಕತ್ವಕ್ಕೆ ಆಯ್ಕೆ ಮಾಡಿದರೂ, ಅವರಿಗೆ ನಿರ್ದಿಷ್ಟ ಅಧಿಕಾರಾವಧಿ ನಿಗದಿಪಡಿಸಬೇಕು ಮತ್ತು ತಮ್ಮ ಯೋಜನೆಗಳನ್ನು ಯಾವುದೇ ಹಸ್ತಕ್ಷೇಪ ಇಲ್ಲದೇ ಕಾರ್ಯಗತಗೊಳಿಸಲು ಅನುವು ಮಾಡಿಕೊಡಬೇಕು ಎಂಬ ಬೇಡಿಕೆಯನ್ನು ಮಂಡಳಿಯ ಮುಂದಿಟ್ಟಿದ್ದಾರೆ.
ಬ್ಯಾಟಿಂಗ್ ಫಾರ್ಮ್ ನಲ್ಲಿ ಕ್ಷಮತೆ ಹಾಗೂ ಹೋರಾಟದ ಮನೋಭಾವಕ್ಕೆ ಹೆಸರಾಗಿರುವ 33 ವರ್ಷದ ಬ್ಯಾಟ್ಸ್ಮನ್-ವಿಕೆಟ್ ಕೀಪರ್, ಎಲ್ಲ ವಿಧದ ಕ್ರಿಕೆಟ್ ನಲ್ಲಿ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆದವರು. ಆದರೆ 2024ರ ಡಿಸೆಂಬರ್ನಿಂದೀಚೆಗೆ ಟಿ20 ತಂಡಕ್ಕೆ ಅವರನ್ನು ಪರಿಗಣಿಸಿಲ್ಲ ಹಾಗೂ ಏಕದಿನ ತಂಡದ ನಾಯಕತ್ವದಿಂದ ಅವರನ್ನು ಕಿತ್ತುಹಾಕಿ ಶಹೀನ್ ಶಾ ಅಫ್ರೀದಿಯವರನ್ನು ನೇಮಕ ಮಾಡಲಾಗಿತ್ತು.







