ಭಾರತ ಫುಟ್ಬಾಲ್ ತಂಡದ ಮಾಜಿ ಆಟಗಾರ ಟಿ.ಕೆ. ಚತುನ್ನಿ ನಿಧನ
ಟಿ.ಕೆ. ಚತುನ್ನಿ (Photo credit: zeenews.india.com)
ತಿರುವನಂತಪುರಂ: ಭಾರತದ ಮಾಜಿ ಫುಟ್ ಬಾಲ್ ಆಟಗಾರ ಹಾಗೂ ಪ್ರಖ್ಯಾತ ಫುಟ್ ಬಾಲ್ ತರಬೇತುದಾರರ ಪೈಕಿ ಓರ್ವರಾಗಿದ್ದ ಟಿ.ಕೆ. ಚತುನ್ನಿ ಬುಧವಾರ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಐ.ಎಂ.ವಿಜಯನ್, ಬ್ರೂನೊ ಕುಟಿನ್ಹೊ, ಜೊ ಪಾಲ್ ಅಂಚೇರಿ, ಸಿ.ವಿ.ಪಾಪ್ಪಚ್ಚನ್ ಹಾಗೂ ಉ.ಶರಫಾಲಿಯಂತಹ ಪ್ರಖ್ಯಾತ ಫುಟ್ ಬಾಲ್ ಕ್ರೀಡಾಪಟುಗಳು ಸೇರಿದಂತೆ ಅಸಂಖ್ಯಾತ ಪ್ರತಿಭಾವಂತ ಆಟಗಾರರನ್ನು ರೂಪಿಸಿದ ಹಿರಿಮೆ ಅವರದಾಗಿತ್ತು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ತ್ರಿಶೂರ್ ಬಳಿಯಿರುವ ಕರುಕುಟ್ಟಿಯಲ್ಲಿನ ಅಪೊಲೊ ಆ್ಯಡ್ಲಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ 7.45ರ ಸುಮಾರಿಗೆ ಕೊನೆಯುಸಿರೆಳೆದರು.
ಚತುನ್ನಿಯವರ ಆರೋಗ್ಯವು ಮಂಗಳವಾರ ವಿಷಮಿಸಿದ್ದರಿಂದ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಮ್ಮ ದಾಖಲಾರ್ಹ ವೃತ್ತಿ ಜೀವನದಲ್ಲಿ ಚತುನ್ನಿ ಎಫ್ಸಿ ಕೊಚ್ಚಿನ್, ಡೆಂಪೊ ಎಸ್ಸಿ, ಸಲಗಾಂವ್ಕರ್ ಎಸ್ಸಿ, ಮೋಹನ್ ಬಾಗನ್ ಎಫ್ಸಿ, ಚರ್ಚಿಲ್ ಬ್ರದರ್ಸ್, ಚಿರಾಗ್ ಯುನೈಟೆಡ್ ಕ್ಲಬ್ ಹಾಗೂ ಜೋಸ್ಕೊ ಎಫ್ಸಿಯಂತಹ ಪ್ರತಿಷ್ಠಿತ ಕ್ಲಬ್ ಗಳ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು.