2003ರ ಭಾರತದ ವಿರುದ್ಧದ ಫೈನಲ್ ಪಂದ್ಯದ ಗೆಲುವು ಮೆಲುಕು ಹಾಕಿದ ರಿಕಿ ಪಾಂಟಿಂಗ್

Photo : mint.com
ಅಹಮದಾಬಾದ್: ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಇಂದಿಗೂ ಕಾಡುತ್ತಿರುವ 2003ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದೆದುರಿನ ಭಾರತ ತಂಡದ ಸೋಲಿನ ಕುರಿತು ಮಾಜಿ ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್ ಮತ್ತೊಮ್ಮೆ ಮೆಲುಕು ಹಾಕಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆ ಪಂದ್ಯದಲ್ಲಿ ಟಾಸ್ ಗೆದ್ದು, ಆಸ್ಟ್ರೇಲಿಯಾ ತಂಡಕ್ಕೆ ಬ್ಯಾಟಿಂಗ್ ಮಾಡುವ ಅವಕಾಶವನ್ನು ಭಾರತ ತಂಡದ ನಾಯಕ ಸೌರವ್ ಗಂಗೂಲಿ ನೀಡಿದ್ದರು. ಆದರೆ, ಆ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದ ಆಸ್ಟ್ರೇಲಿಯಾ ತಂಡದ ಬ್ಯಾಟರ್ ಗಳಾದ ಆ್ಯಡಮ್ ಗಿಲ್ ಕ್ರಿಸ್ಟ್, ಮ್ಯಾಥ್ಯೂ ಹೇಡನ್ ಹಾಗೂ ರಿಕಿ ಪಾಂಟಿಂಗ್, ತಮ್ಮ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿದ್ದರು. ಅಲ್ಲದೆ ರಿಕಿ ಪಾಂಟಿಂಗ್ ಹಾಗೂ ಮ್ಯಾಥ್ಯೂ ಹೇಡನ್ ದಾಖಲೆಯ ಜೊತೆಯಾಟವಾಡಿದ್ದರು.
“ನಾನು ಅರ್ಧ ಶತಕ ಪೂರೈಸಲು ಸುಮಾರು 70 ಬಾಲ್ ಗಳನ್ನು ತೆಗೆದುಕೊಂಡಿದ್ದೆ. ಆಟವು ನಮ್ಮ ನಿಯಂತ್ರಣದಲ್ಲಿ ಇದ್ದುದರಿಂದ ಹಾಗೂ ನಾವು ಕ್ಷಿಪ್ರವಾಗಿ ರನ್ ಗಳಿಸುತ್ತಿದ್ದುದರಿಂದ ನಾನು ಪಂದ್ಯದ ಕೊನೆಯವರೆಗೂ ಕ್ರೀಸ್ ನಲ್ಲಿ ಉಳಿಯುವುದನ್ನು ಖಾತ್ರಿಗೊಳಿಸಬೇಕು ಎಂದು ನಿರ್ಧರಿಸಿದ್ದೆ. ಹನ್ನೆರಡನೆಯ ಆಟಗಾರನು ನನ್ನ ಬಳಿ ಬಂದಾಗ, “ಹುಡುಗರಿಗೆ ತಮ್ಮ ಆಸನದ ಬೆಲ್ಟ್ ಗಳನ್ನು ಕಟ್ಟಿಕೊಳ್ಳಲು ಹೇಳು. ನಾನು ಈಗಿನಿಂದ ಬಾಲ್ ಗಳನ್ನು ನೇರವಾಗಿ ಬಾರಿಸಲಿದ್ದೇನೆ ಹಾಗೂ ಮುಂದೆ ಏನಾಗುತ್ತದೆ ನೋಡೋಣ” ಎಂದು ಹೇಳಿ ಕಳಿಸಿದ್ದೆ. ಅಲ್ಲಿಂದಾಚೆಗೆ ನಾನು ನನ್ನ ಬ್ಯಾಟ್ ನ ಮಧ್ಯಭಾಗದಿಂದ ಬಾಲ್ ಗಳನ್ನು ಬಾರಿಸತೊಡಗಿದೆ” ಎಂದು ರಿಕಿ ಪಾಂಟಿಂಗ್ ಸ್ಮರಿಸಿಕೊಂಡಿದ್ದಾರೆ ಎಂದು ಅವರನ್ನು ಉಲ್ಲೇಖಿಸಿ cricket.com.au ವರದಿ ಮಾಡಿದೆ.
“ಓರ್ವ ನಾಯಕನಾಗಿ ನಾನು ನನ್ನ ಕಾಣಿಕೆ ನೀಡಬೇಕಿತ್ತು ಹಾಗೂ ಅಜೇಯ 140 ಗಳಿಸಿ ಮೈದಾನದಿಂದ ಹೊರ ನಡೆದಿದ್ದೆ. ಇದರೊಂದಿಗೆ ಡೇಮಿಯನ್ ಮಾರ್ಟಿನ್ ರೊಂದಿಗೆ ದಾಖಲೆಯ ಜೊತೆಯಾಟವಾಡಿ, ವಿಶ್ವಕಪ್ ಫೈನಲ್ ಪಂದ್ಯದಲ್ಲಿ 360 ರನ್ ಗಳ ಗುರಿಯನ್ನು ಒಡ್ಡಿದ್ದೆ. ನಾವು ಅಲ್ಲಿಂದ ತೆರಳುವಾಗ, ಮಾಡಬೇಕಾದದ್ದನ್ನು ಮಾಡಿಯಾಗಿದೆ. ಪಂದ್ಯ ಅಂತ್ಯಗೊಂಡಿದೆ. ನಾವು ನಮ್ಮ ಗುರಿಯನ್ನು ತಲುಪಿದ್ದೇವೆ ಎಂದು ನಿಮಗನಿಸಿರುತ್ತದೆ” ಎಂದೂ ಪಾಂಟಿಂಗ್ ಹೇಳಿದ್ದಾರೆ.
ಆ ಪಂದ್ಯದಲ್ಲಿ ಕೇವಲ 74 ಬಾಲ್ ಗಳಲ್ಲಿ ಶತಕ ಬಾರಿಸಿದ್ದ ಪಾಂಟಿಂಗ್, ಪಂದ್ಯದ ಅಂತ್ಯಕ್ಕೆ 140 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಅವರ ಕೊನೆಯ 90 ರನ್ ಗಳು ಕೇವಲ 47 ಬಾಲ್ ಗಳಲ್ಲಿ ಬಂದಿದ್ದವು ಹಾಗೂ ಹರ್ಭಜನ್ ಸಿಂಗ್ ಓವರ್ ನಲ್ಲಿ ಪಾಂಟಿಂಗ್ ಸತತ ಮೂರು ಸಿಕ್ಸರ್ ಗಳನ್ನು ಸಿಡಿಸಿದ್ದರು.
ಪಂದ್ಯದ ಅಂತ್ಯಕ್ಕೆ ಭಾರತ ತಂಡವು ಕೇವಲ 234 ರನ್ ಗಳಿಗೆ ಪತನಗೊಂಡಿದ್ದರಿಂದ, ಆಸ್ಟ್ರೇಲಿಯಾ ತಂಡವು 125 ರನ್ ಗಳ ಬೃಹತ್ ಜಯದೊಂದಿಗೆ ಐದನೆಯ ಬಾರಿ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿತ್ತು.







