ನಾನು ವಿರಾಟ್ ಕೊಹ್ಲಿಗಿಂತ ಅತ್ಯುತ್ತಮ ಏಕದಿನ ಆಟಗಾರನನ್ನು ಕಂಡಿಲ್ಲ: ರಿಕಿ ಪಾಂಟಿಂಗ್ ಶ್ಲಾಘನೆ

Photo: Reuters
ದುಬೈ: ನಾನು ವಿರಾಟ್ ಕೊಹ್ಲಿಗಿಂತ ಅತ್ಯುತ್ತಮ ಏಕದಿನ ಕ್ರಿಕೆಟ್ ಆಟಗಾರನನ್ನು ಕಂಡಿಲ್ಲ ಎಂದು ಶ್ಲಾಘಿಸಿರುವ ಆಸ್ಟ್ರೇಲಿಯ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್, 50 ಓವರ್ ಗಳ ಮಾದರಿಯಲ್ಲಿ ಅವರು ದಂತಕತೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಬೇಕು ಎಂದು ಹಾರೈಸಿದ್ದಾರೆ.
ರವಿವಾರ ಪಾಕಿಸ್ತಾನ ತಂಡದ ವಿರುದ್ಧ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 51ನೇ ಶತಕ ಬಾರಿಸಿ, ಭಾರತ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.
“50 ಓವರ್ ಗಳ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿಗಿಂತ ಉತ್ತಮ ಆಟಗಾರನನ್ನು ನಾನು ಕಂಡಿದ್ದೇನೆ ಎಂದು ನನಗನ್ನಿಸುತ್ತಿಲ್ಲ. ಅವರು ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ನನ್ನನ್ನು ಹಿಂದಿಕ್ಕಿದ್ದು, ಅವರ ಮುಂದೆ ಇನ್ನಿಬ್ಬರು ಆಟಗಾರರು ಮಾತ್ರ ಇದ್ದಾರೆ. 50 ಓವರ್ ಗಳ ಕ್ರಿಕೆಟ್ ಮಾದರಿಯಲ್ಲಿ ತಾನು ಮುಂಚೂಣಿ ಸ್ಕೋರರ್ ಆಗುವ ದಿಕ್ಕಿನತ್ತ ಅವರು ಪ್ರಯತ್ನಿಸಲಿದ್ದಾರೆ ಎಂಬ ಬಗ್ಗೆ ನನಗೆ ಖಾತರಿ ಇದೆ” ಎಂದೂ ಅವರು ಐಸಿಸಿ ಪರಾಮರ್ಶೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಶತಕ ಬಾರಿಸುವ ಹಾದಿಯಲ್ಲಿ 14,000 ರನ್ ಗಳ ಗಡಿ ದಾಟಿದ್ದ ವಿರಾಟ್ ಕೊಹ್ಲಿ, ಇದೀಗ ಆ ಅಪರೂಪದ ಸಾಧನೆ ಮಾಡಿರುವ ಭಾರತದ ಸಚಿನ್ ತೆಂಡೂಲ್ಕರ್ ಹಾಗೂ ಶ್ರೀಲಂಕಾದ ಕುಮಾರ್ ಸಂಗಕ್ಕಾರರ ಸಾಲಿಗೆ ಸೇರ್ಪಡೆಯಾಗಿದ್ದಾರೆ.





