ಟಿ20 ವಿಶ್ವಕಪ್ ತಂಡದಲ್ಲಿ ರಿಂಕು ಸಿಂಗ್ ಸೇರ್ಪಡೆ ಖಚಿತ : ಕೆ.ಶ್ರೀಕಾಂತ್
ರಿಂಕು ಸಿಂಗ್ | PC : PTI
ಹೊಸದಿಲ್ಲಿ: ಎಡಗೈ ಪವರ್-ಹಿಟ್ಟರ್ ರಿಂಕು ಸಿಂಗ್ ಮುಂಬರುವ ಪುರುಷರ ಟಿ20 ವಿಶ್ವಕಪ್ಗೆ ಭಾರತದ 15 ಸದಸ್ಯರ ತಂಡದಲ್ಲಿ ಸೇರ್ಪಡೆಯಾಗುವುದು ಖಚಿತ ಎಂದು ಭಾರತದ ಮಾಜಿ ನಾಯಕ ಹಾಗೂ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ಕೃಷ್ಣಮಾಚಾರಿ ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್-2023ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೆಕೆಆರ್ ಇನಿಂಗ್ಸ್ನಲ್ಲಿ ಸತತ ಐದು ಸಿಕ್ಸರ್ಗಳನ್ನು ಸಿಡಿಸುವ ಮೂಲಕ ರಿಂಕು ಎಲ್ಲರ ಗಮನ ಸೆಳೆದಿದ್ದರು. ಕಳೆದ ವರ್ಷ ಟೂರ್ನಿಯುದ್ದಕ್ಕೂ ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯ ಮೂಲಕ ಪಂದ್ಯಕ್ಕೆ ಅಂತಿಮ ಸ್ಪರ್ಶ ನೀಡಿದ್ದರು. ಈ ಪ್ರದರ್ಶನದ ಫಲವಾಗಿ ಕಳೆದ ವರ್ಷಾಂತ್ಯಕ್ಕೆ ಟೀಮ್ ಇಂಡಿಯಾದ ಟಿ20 ತಂಡದಲ್ಲಿ ಮೊದಲ ಬಾರಿ ಸ್ಥಾನ ಗಿಟ್ಟಿಸಿಕೊಂಡಿದ್ದರು.
ಟಿ20 ಕ್ರಿಕೆಟಿಗೆ ಕಾಲಿಟ್ಟ ವರ್ಷದಲ್ಲಿ ಕೇವಲ 15 ಪಂದ್ಯಗಳಲ್ಲಿ 356 ರನ್ ಗಳಿಸಿದ್ದರು. 7 ಇನಿಂಗ್ಸ್ಗಳಲ್ಲಿ ಔಟಾಗದೆ ಉಳಿದಿದ್ದರು. ಒತ್ತಡದಲ್ಲಿ ಪವರ್ ಹಿಟ್ಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು.
ಈ ವರ್ಷದ ಐಪಿಎಲ್ನಲ್ಲಿ ಕೆಕೆಆರ್ ತಂಡದ ಅಗ್ರ ಸರದಿಯ ಬ್ಯಾಟರ್ಗಳು ಹೆಚ್ಚು ರನ್ ಗಳಿಸಿದ ಕಾರಣ ರಿಂಕುಗೆ ಬ್ಯಾಟಿಂಗ್ ಮಾಡಲು ಹೆಚ್ಚು ಸಮಯ ಲಭಿಸಿರಲಿಲ್ಲ. ರಿಂಕು 8 ಪಂದ್ಯಗಳಲ್ಲಿ 157.74ರ ಸ್ಟ್ರೈಕ್ರೇಟ್ನಲ್ಲಿ 112 ರನ್ ಗಳಿಸಿದ್ದಾರೆ.
ರಿಂಕು ಸಿಂಗ್ ಒಂದು ಶ್ರೇಷ್ಠ ಉದಾಹರಣೆ. ನನ್ನ 15ರ ತಂಡದಲ್ಲಿ ರಿಂಕುಗೆ ಸ್ಥಾನ ಖಚಿತ. ಈ ವರ್ಷದ ಐಪಿಎಲ್ನಲ್ಲಿ ಅವರು ಬ್ಯಾಟಿಂಗ್ ಮಾಡಲು ಹೆಚ್ಚು ಅವಕಾಶ ಪಡೆದಿಲ್ಲ. ಅವರ ಅಂತರರಾಷ್ಟ್ರೀಯ ದಾಖಲೆಯನ್ನು ಎಲ್ಲರೂ ನೋಡಿದ್ದಾರೆ. ಇದು ಅದ್ಭುತ ದಾಖಲೆಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಅವರ ದಾಖಲೆ ಅಮೋಘವಾಗಿತ್ತು. ಪ್ರತಿಯೊಂದು ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿರುವ ಅವರು 15ರ ಬಳಗದಲ್ಲಿ ಸ್ಥಾನ ಪಡೆಯಬೇಕು ಎಂದು ಶ್ರೀಕಾಂತ್ ಆಗ್ರಹಿಸಿದರು.