ಬಿಲ್ಲುಗಾರಿಕೆ ವಿಶ್ವಕಪ್-2025 | ಕಾಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ರಿಷಭ್, ಜ್ಯೋತಿ

ರಿಷಭ್ ಯಾದವ್ ಮತ್ತು ಜ್ಯೋತಿ ಸುರೇಖಾ ವೆನ್ನಮ್ | PC : X | @India_AllSports
ಮ್ಯಾಡ್ರಿಡ್ (ಸ್ಪೇನ್): ಸ್ಪೇನ್ ದೇಶದ ಮ್ಯಾಡ್ರಿಡ್ ನಲ್ಲಿ ನಡೆಯುತ್ತಿರುವ ಬಿಲ್ಲುಗಾರಿಕೆ ವಿಶ್ವಕಪ್ 2025ರ ನಾಲ್ಕನೇ ಹಂತದಲ್ಲಿ ಭಾರತದ ರಿಷಭ್ ಯಾದವ್ ಮತ್ತು ಜ್ಯೋತಿ ಸುರೇಖಾ ವೆನ್ನಮ್ ಕಾಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಅರ್ಹತಾ ಸುತ್ತಿನಲ್ಲಿ ರಿಷಭ್ ಮತ್ತು ಜ್ಯೋತಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವೈಯಕ್ತಿಕ ರ್ಯಾಂಕಿಂಗ್ಗಳಲ್ಲಿ 716 ಮತ್ತು 715 ಅಂಕಗಳನ್ನು ಗಳಿಸಿ ಅಗ್ರ ಸ್ಥಾನಿಗಳಾಗಿದ್ದಾರೆ. ಅವರು ವಿಶ್ವಕಪ್ ಒಂದನೇ ಹಂತದಲ್ಲಿ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.
ಅವರ ಒಟ್ಟು ಸ್ಕೋರ್ 1431. ಇದು 2023ರಲ್ಲಿ ಡೆನ್ಮಾರ್ಕ್ನ ಜೋಡಿ ಟಂಜ ಗೆಲಂತೀನ್ ಮತ್ತು ಮಥಾಯಸ್ ಫಲರ್ಟನ್ ಸ್ಥಾಪಿಸಿರುವ ವಿಶ್ವ ದಾಖಲೆ 1429ಕ್ಕಿಂತ ಅಧಿಕವಾಗಿದೆ.
ರಿಷಭ್ ತನ್ನ ಮೊದಲ 30 ಬಾಣಗಳಲ್ಲಿ ಪೂರ್ಣ ಅಂಕಗಳನ್ನು ಸಂಪಾದಿಸಿದರು. ಅವರು ಬ್ರ್ಯಾಡನ್ ಗೆಲಂತೀನ್ರ ವಿಶ್ವ ದಾಖಲೆಯಿಂದ ಕೇವಲ 2 ಅಂಕ ಹಿಂದಿದ್ದಾರೆ.
ಜ್ಯೋತಿ 67 ಬಾಣಗಳಲ್ಲಿ ಒಂದು ಅಂಕವನ್ನೂ ಬಿಟ್ಟುಕೊಡಲಿಲ್ಲ.
ಜ್ಯೋತಿ, ಪರ್ಣೀತ್ ಕೌರ್ ಮತ್ತು ಪ್ರೀತಿಕಾ ಪ್ರದೀಪ್ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡವು ಅಮೋಘ ಪ್ರದರ್ಶನ ನೀಡಿದ್ದು, ಫೈನಲ್ನಲ್ಲಿ ಚೈನೀಸ್ ತೈಪೆಯ ವಿರುದ್ಧ ಆಡಲಿದೆ.
ರಿಷಭ್, ಪ್ರಥಮೇಶ್ ಫುಗೆ ಮತ್ತು ಅಮನ್ ಸೈನಿ ಅವರನ್ನೊಳಗೊಂಡ ಪುರುಷರ ತಂಡವು ಕ್ವಾರ್ಟರ್ಫೈನಲ್ನಲ್ಲಿ ಫ್ರಾನ್ಸ್ ತಂಡದ ವಿರುದ್ಧ ಸೋಲನುಭವಿಸಿತು.







