ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್: ರೋಹಿತ್ ದಾಖಲೆ ಮುರಿದ ರಿಷಭ್ ಪಂತ್

ರಿಷಭ್ ಪಂತ್ | PC : X
ಲೀಡ್ಸ್: ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ತನ್ನ ಪ್ರಾಬಲ್ಯ ಮೆರೆದಿದ್ದು ಇಂಗ್ಲೆಂಡ್ ತಂಡ ವಿರುದ್ಧದ ಮೊದಲ ಟೆಸ್ಟ್ನ ಮೊದಲ ದಿನದಾಟದಂತ್ಯಕ್ಕೆ ಔಟಾಗದೆ 65 ರನ್ ಗಳಿಸಿದರು. ಈ ವೇಳೆ ಅವರು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿನ ದಾಖಲೆಯೊಂದನ್ನು ಮುರಿದರು.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾರ ದಾಖಲೆಯನ್ನು ಮುರಿದರು.
ಎಡಗೈ ಬ್ಯಾಟರ್ ಪಂತ್ ತನ್ನ ಇನಿಂಗ್ಸ್ನಲ್ಲಿ ಆಕ್ರಮಣಕಾರಿ ಹಾಗೂ ರಕ್ಷಣಾತ್ಮಕ ಶೈಲಿಯ ಆಟದಿಂದ ತನ್ನ ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿದರು. ಪಂತ್ ಪ್ರದರ್ಶನದಿಂದ ಮೊದಲ ದಿನದಾಟದಂತ್ಯಕ್ಕೆ ಭಾರತ ತಂಡ ಸುಸ್ಥಿತಿಗೆ ತಲುಪಿತು.
ಡಬ್ಲ್ಯುಟಿಸಿಯಲ್ಲಿ ಪಂತ್ ಸಾಧನೆಯು ಗರಿಷ್ಠ ಸಿಕ್ಸರ್ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾರನ್ನು ಹಿಂದಿಕ್ಕುವಂತೆ ಮಾಡಿದೆ. ಈ ಇಬ್ಬರು ಆಟಗಾರರು ಈ ಹಿಂದೆ ತಲಾ 56 ಸಿಕ್ಸರ್ಗಳನ್ನು ಸಿಡಿಸಿದ್ದರು.
ಇದೀಗ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ರೋಹಿತ್ ಅವರು ತನ್ನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ವೃತ್ತಿಜೀವನದಲ್ಲಿ 56 ಸಿಕ್ಸರ್, 9 ಶತಕಗಳು ಹಾಗೂ 8 ಅರ್ಧಶತಕಗಳ ಸಹಿತ 2,716 ರನ್ ಗಳಿಸಿದ್ದಾರೆ. ಪಂತ್ ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ 4 ಶತಕ ಹಾಗೂ 14 ಅರ್ಧಶತಕಗಳ ಸಹಿತ 2,317 ರನ್ ಗಳಿಸಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಗರಿಷ್ಠ ಸಿಕ್ಸರ್ ಸರದಾರರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಸ್ಟೋಕ್ಸ್ ಅವರು ಒಟ್ಟು 83 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಸ್ಟೋಕ್ಸ್ ಅವರು ಚಾಂಪಿಯನ್ ಶಿಪ್ ನಲ್ಲಿ 7 ಶತಕಗಳು ಹಾಗೂ 17 ಅರ್ಧಶತಕಗಳ ಸಹಿತ 3,312 ರನ್ ಗಳಿಸಿದ್ದು, 82 ವಿಕೆಟ್ಗಳನ್ನು ಉರುಳಿಸಿದ್ದಾರೆ.







