ಭಾರತ-ಇಂಗ್ಲೆಂಡ್ ಪ್ರಥಮ ಟೆಸ್ಟ್ | ಚೆಂಡು ಬದಲಿಸದ ಅಂಪೈರ್ ವಿರುದ್ಧ ಆಕ್ರೋಶ: ಪಂತ್ ಗೆ ನಿಷೇಧದ ಭೀತಿ?

ರಿಷಭ್ ಪಂತ್ | PC : X \ @CricketNDTV
ಲೀಡ್ಸ್: ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ಧದ ಪ್ರಥಮ ಟೆಸ್ಟ್ ನಲ್ಲಿ ಅಮೋಘ ಶತಕ ಬಾರಿಸುವ ಮೂಲಕ ಸುದ್ದಿ ಮಾಡಿದ್ದ ಭಾರತ ತಂಡದ ಉಪ ನಾಯಕ ರಿಷಭ್ ಪಂತ್, ಇದೀಗ ಪಂದ್ಯದ ಮೂರನೆ ದಿನದಾಟದಲ್ಲಿ ವಿಕೆಟ್ ಕೀಪಿಂಗ್ ವೇಳೆ ಅನುಚಿತ ವರ್ತನೆ ತೋರಿದ್ದಕ್ಕಾಗಿ ನಿಷೇಧದ ಭೀತಿಗೆ ಸಿಲುಕಿದ್ದಾರೆ.
ಇಂಗ್ಲೆಂಡ್ ತಂಡದ ಎರಡನೆ ಇನಿಂಗ್ಸ್ ಬ್ಯಾಟಿಂಗ್ ವೇಳೆ ರಿಷಭ್ ಪಂತ್ ಚೆಂಡು ಬದಲಿಸುವಂತೆ ಅಂಪೈರ್ ಅನ್ನು ಕೋರಿದರು. ಆದರೆ, ಚೆಂಡು ಪರಿಶೀಲಿಸಿದ ಅಂಪೈರ್, ಚೆಂಡು ಬದಲಾವಣೆಗೆ ನಿರಾಕರಿಸಿದರು. ಅಂಪೈರ್ ಅವರ ಈ ನಿರ್ಧಾರದಿಂದ ಅಸಮಾಧಾನಗೊಂಡ ಪಂತ್, ಚೆಂಡನ್ನು ಬಲವಾಗಿ ನೆಲಕ್ಕೆ ಎಸೆದಿದ್ದರು.
ಅಂಪೈರ್ ನಿರ್ಧಾರಕ್ಕೆ ವ್ಯತಿರಿಕ್ತವಾಗಿ ಪಂತ್ ತೋರಿದ ಈ ಅನುಚಿತ ವರ್ತನೆಯು ಐಸಿಸಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದ್ದು, ಈ ಕುರಿತು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರ ಬಿದ್ದಿಲ್ಲ.
ಈ ನಡುವೆ, ಇಂಗ್ಲೆಂಡ್ ತಂಡದ ಎದುರಿನ ಪ್ರಥಮ ಟೆಸ್ಟ್ ನ ಮೂರನೆಯ ದಿನದಾಟದ ಅಂತ್ಯಕ್ಕೆ ಭಾರತ ತಂಡ 96 ರನ್ ಗಳ ಮುನ್ನಡೆ ಗಳಿಸಿದೆ. ದಿನದಾಟದಂತ್ಯಕ್ಕೆ ಭಾರತ ತಂಡ 2 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದ್ದು, ಕ್ರಮವಾಗಿ 47 ರನ್ ಹಾಗೂ 6 ರನ್ ಗಳಿಸಿರುವ ಕೆ.ಎಲ್.ರಾಹುಲ್ ಹಾಗೂ ಶುಭಮನ್ ಗಿಲ್ ಕ್ರೀಸಿನಲ್ಲಿದ್ದಾರೆ.







