ರೋಹಿತ್ ಶರ್ಮಾರ ಡಬ್ಲ್ಯುಟಿಸಿ ದಾಖಲೆ ಮುರಿಯುವತ್ತ ರಿಷಭ್ ಪಂತ್

ರಿಷಭ್ ಪಂತ್ , ರೋಹಿತ್ ಶರ್ಮಾ | PTI
ಲಂಡನ್, ಜು.18: ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳು 9 ದಿನಗಳ ವಿರಾಮದ ನಂತರ ಮ್ಯಾಂಚೆಸ್ಟರ್ನಲ್ಲಿ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಗಾಗಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಸರಣಿ ಸಮಬಲಗೊಳಿಸಲು ಭಾರತ ತಂಡಕ್ಕೆ ಈ ಪಂದ್ಯ ನಿರ್ಣಾಯಕವಾಗಿದೆ. ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರು ರೋಹಿತ್ ಶರ್ಮಾರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್(ಡಬ್ಲ್ಯುಟಿಸಿ)ರನ್ ದಾಖಲೆಯನ್ನು ಮುರಿಯುವ ಹಾದಿಯಲ್ಲಿದ್ದಾರೆ.
ಪಂತ್ ಅವರು ಸದ್ಯ ಭಾರತ ತಂಡದ ಪರ ಡಬ್ಲ್ಯುಟಿಸಿ ಇತಿಹಾಸದಲ್ಲಿ 2,677 ರನ್ ಗಳಿಸಿದ್ದು, ರೋಹಿತ್ ಶರ್ಮಾ ದಾಖಲೆ(2,716 ರನ್)ಗಿಂತ ಕೇವಲ 40 ರನ್ ಹಿಂದಿದ್ದಾರೆ. 4ನೇ ಟೆಸ್ಟ್ ಪಂದ್ಯದಲ್ಲಿ ಪಂತ್ ಭಾರತದ ಮಾಜಿ ನಾಯಕನ ಮೈಲಿಗಲ್ಲು ಮುರಿಯುವ ವಿಶ್ವಾಸದಲ್ಲಿದ್ದಾರೆ.
ಭಾರತೀಯ ಬ್ಯಾಟರ್ಗಳ ಡಬ್ಲ್ಯುಟಿಸಿ ರನ್ ಸ್ಕೋರಿಂಗ್ ಪಟ್ಟಿಯಲ್ಲಿ ರೋಹಿತ್ ಶರ್ಮಾ(69 ಇನಿಂಗ್ಸ್, 2,716 ರನ್)ಮೊದಲ ಸ್ಥಾನದಲ್ಲಿದ್ದಾರೆ. ಆ ನಂತರ ರಿಷಭ್ ಪಂತ್(67 ಇನಿಂಗ್ಸ್, 2,677 ರನ್)ಅವರಿದ್ದಾರೆ. ವಿರಾಟ್ ಕೊಹ್ಲಿ(79 ಇನಿಂಗ್ಸ್, 2,617 ರನ್)3ನೇ ಸ್ಥಾನದಲ್ಲಿದ್ದಾರೆ. ಹಾಲಿ ನಾಯಕ ಶುಭಮನ್ ಗಿಲ್ 65 ಇನಿಂಗ್ಸ್ ಗಳಲ್ಲಿ 2,500 ರನ್ ಗಳಿಸಿದ್ದಾರೆ. ರವೀಂದ್ರ ಜಡೇಜ ಅವರು 64 ಇನಿಂಗ್ಸ್ ಗಳಲ್ಲಿ 2212 ರನ್ ಗಳಿಸಿ ಟಾಪ್-5ರಲ್ಲಿದ್ದಾರೆ.
‘ಸ್ಕೈಸ್ಪೋರ್ಟ್ಸ್’ ಪ್ರಕಾರ ಪಂತ್ ಅವರು ಮ್ಯಾಂಚೆಸ್ಟರ್ನಲ್ಲಿ ನಡೆಯಲಿರುವ 4ನೇ ಪಂದ್ಯದಲ್ಲಿ ಆಡಲು ಫಿಟ್ ಇದ್ದಾರೆ.
‘‘ರಿಷಭ್ ಪಂತ್ ಸ್ಕ್ಯಾನಿಂಗ್ಗೆ ಒಳಗಾಗಿದ್ದು, ಗಂಭೀರ ಗಾಯವಾಗಿಲ್ಲ. ಅವರು 4ನೇ ಟೆಸ್ಟ್ಗೆ ಲಭ್ಯ ಇರುತ್ತಾರೆ’’ ಎಂದು ನಾಯಕ ಗಿಲ್ 3ನೇ ಟೆಸ್ಟ್ ಸೋತ ನಂತರ ಹೇಳಿದ್ದರು.







