ದಕ್ಷಿಣ ಆಫ್ರಿಕ ವಿರುದ್ಧ ಸರಣಿ ಸೋಲು: ಅಭಿಮಾನಿಗಳ ಕ್ಷಮೆ ಕೋರಿದ ರಿಷಭ್ ಪಂತ್

ರಿಷಭ್ ಪಂತ್ | Photo Credit : PTI
ಮುಂಬೈ, ನ. 27: ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವು ಉತ್ತಮ ಕ್ರಿಕೆಟ್ ಆಡಲಿಲ್ಲ ಎನ್ನುವುದನ್ನು ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಶಭ್ ಪಂತ್ ಒಪ್ಪಿಕೊಂಡಿದ್ದಾರೆ ಹಾಗೂ ಅಭಿಮಾನಿಗಳ ನಿರೀಕ್ಷೆಯ ಮಟ್ಟಕ್ಕೆ ಆಡಲು ವಿಫಲವಾಗಿರುವುದಕ್ಕಾಗಿ ಅವರ ಕ್ಷಮೆ ಯಾಚಿಸಿದ್ದಾರೆ.
ಕೋಲ್ಕತ ಮತ್ತು ಗುವಾಹಟಿಯಲ್ಲಿ ನಡೆದ ಎರಡು ಪಂದ್ಯಗಳ ಸರಣಿಯನ್ನು ಭಾರತವು 0-2 ಅಂತರದಿಂದ ಕಳೆದುಕೊಂಡಿದೆ. ಇದು ಭಾರತದಲ್ಲಿ ದಕ್ಷಿಣ ಆಫ್ರಿಕದ ಎರಡನೇ ಟೆಸ್ಟ್ ಸರಣಿ ವಿಜಯವಾಗಿದೆ. ಇದಕ್ಕೂ ಮೊದಲು, 2000 ಫೆಬ್ರವರಿ-ಮಾರ್ಚ್ನಲ್ಲಿ ಹ್ಯಾನ್ಸಿ ಕ್ರೋನಿಯೆ ನೇತೃತ್ವದ ತಂಡವು 2-0 ಅಂತರದಿಂದ ಟೆಸ್ಟ್ ಸರಣಿಯನ್ನು ಗೆದ್ದಿತ್ತು.
ಬುಧವಾರದ ಸೋಲಿನ ಬಳಿಕ, ಪ್ರಧಾನ ಕೋಚ್ ಮತ್ತು ಆಟಗಾರರು ಅಭಿಮಾನಿಗಳು ಮತ್ತು ಕ್ರಿಕೆಟ್ ವಿಶ್ಲೇಷಕರಿಂದ ತೀವ್ರ ಟೀಕೆಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಪಂತ್ ಇನ್ಸ್ಟಾಗ್ರಾಮ್ ನಲ್ಲಿ ಸಂದೇಶವೊಂದನ್ನು ಹಾಕಿ, ತಂಡದ ವಿಜಯದ ಬಗ್ಗೆ ಭರವಸೆಯನ್ನು ಹೊಂದಿದ್ದ ಪ್ರತಿಯೊಬ್ಬರಲ್ಲೂ ಕ್ಷಮೆ ಕೋರಿದ್ದಾರೆ. ಮುಂದೆ, ತಂಡವಾಗಿ ಮತ್ತು ವ್ಯಕ್ತಿಗಳಾಗಿ ಪ್ರಬಲ ಪ್ರತಿಹೋರಾಟವನ್ನು ನೀಡಲು ಕಠಿಣ ಪರಿಶ್ರಮ ಪಡುವುದಾಗಿ ಅವರು ಭರವಸೆ ನೀಡಿದ್ದಾರೆ.
‘‘ಕಳೆದ ಎರಡು ವಾರಗಳ ಅವಧಿಯಲ್ಲಿ ನಾವು ಉತ್ತಮ ಕ್ರಿಕೆಟ್ ಆಡಲಿಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ. ತಂಡವಾಗಿ ಮತ್ತು ವ್ಯಕ್ತಿಗಳಾಗಿ ನಾವು ಯಾವತ್ತೂ ಅತ್ಯುನ್ನತ ಮಟ್ಟದ ನಿರ್ವಹಣೆ ನೀಡಲು ಮತ್ತು ಕೋಟಿಗಟ್ಟಳೆ ಭಾರತೀಯರ ಮುಖಗಳಿಗೆ ಮಂದಹಾಸವನ್ನು ತರಲು ಬಯಸುತ್ತೇವೆ. ಈ ಬಾರಿ ನಿಮ್ಮ ನಿರೀಕ್ಷೆಗಳ ಮಟ್ಟಕ್ಕೆ ಏರಲು ನಮಗೆ ಸಾಧ್ಯವಾಗಲಿಲ್ಲ, ಕ್ಷಮಿಸಿ. ಆದರೆ ಕಲಿಯಲು, ಹೊಂದಿಕೊಳ್ಳಲು ಮತ್ತು ಬೆಳೆಯಲು ಕ್ರೀಡೆಯು ನಮಗೆ ಕಲಿಸುತ್ತದೆ’’ ಎಂದು ಪಂತ್ ತನ್ನ ಸಂದೇಶದಲ್ಲಿ ಹೇಳಿದ್ದಾರೆ.







