IPL 2026 | ನಿರಾಶಾದಾಯಕ ಪ್ರದರ್ಶನ: ಲಕ್ನೊ ಸೂಪರ್ ಜೈಂಟ್ಸ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ ರಿಷಭ್ ಪಂತ್

ರಿಷಭ್ ಪಂತ್ | Photo Credit : PTI
ಹೊಸದಿಲ್ಲಿ: ಐಪಿಎಲ್ 2026ರ ಋತುವಿನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಲಕ್ನೊ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ತಮ್ಮ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪಂತ್ ಅವರ ಮನವಿಯನ್ನು ತಂಡದ ಆಡಳಿತ ಮಂಡಳಿ ಅಂಗೀಕರಿಸಿದ್ದು, ಈ ವಿಷಯವನ್ನು ಲಕ್ನೊ ಸೂಪರ್ ಜೈಂಟ್ಸ್ ತಂಡ ಸಾಮಾಜಿಕ ಜಾಲತಾಣದ ಪ್ರಕಟಣೆಯ ಮೂಲಕ ದೃಢಪಡಿಸಿದೆ.
Official announcement. pic.twitter.com/7WeOwpkDr6
— Lucknow Super Giants (@LucknowIPL) May 29, 2026
ಈ ಬಾರಿಯ ಐಪಿಎಲ್ ಋತುವಿನಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು. 14 ಪಂದ್ಯಗಳನ್ನು ಆಡಿದ ತಂಡ ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ನಾಯಕ ರಿಷಭ್ ಪಂತ್ ಅವರ ವೈಯಕ್ತಿಕ ಪ್ರದರ್ಶನವೂ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಅವರು ಆಡಿದ 14 ಪಂದ್ಯಗಳಲ್ಲಿ 138.05ರ ಸ್ಟ್ರೈಕ್ರೇಟ್ನೊಂದಿಗೆ ಕೇವಲ 312 ರನ್ ಗಳಿಸಿದ್ದರು. ತಂಡದ ಬ್ಯಾಟಿಂಗ್ ವಿಭಾಗವನ್ನು ಮುನ್ನಡೆಸುವಲ್ಲಿ ಅವರು ವಿಫಲರಾಗಿದ್ದರು.
ಐಪಿಎಲ್ 2025ರ ಆಟಗಾರರ ಹರಾಜಿನಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡ ರಿಷಭ್ ಪಂತ್ ಅವರನ್ನು 27 ಕೋಟಿ ರೂಪಾಯಿಗೆ ಖರೀದಿಸಿತ್ತು. ಆದರೆ ಅವರ ನಾಯಕತ್ವದಲ್ಲಿ ಕಳೆದ ಎರಡು ಋತುಗಳಲ್ಲಿ ತಂಡ ಅಂಕಪಟ್ಟಿಯಲ್ಲಿ ಕ್ರಮವಾಗಿ ಏಳನೇ ಹಾಗೂ ಹತ್ತನೇ ಸ್ಥಾನಗಳಿಗೆ ಕುಸಿದಿದ್ದು, ಎರಡೂ ಬಾರಿ ಟೂರ್ನಿಯಿಂದಲೇ ಹೊರಬಿದ್ದಿದೆ.
ತಂಡದ ಸತತ ವೈಫಲ್ಯದ ಹಿನ್ನೆಲೆಯಲ್ಲಿ ಪಂತ್ ನಾಯಕತ್ವದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.






