2,500 ರನ್ ಗಳಿಸಿದ ಭಾರತದ ಮೊದಲ ವಿಕೆಟ್ಕೀಪರ್ : ಎಂ.ಎಸ್. ಧೋನಿ ದಾಖಲೆ ಮುರಿದ ರಿಷಭ್ ಪಂತ್

ರಿಷಭ್ ಪಂತ್ | Photo Credit : PTI
ಹೊಸದಿಲ್ಲಿ: ವಿದೇಶ ಅಥವಾ ತಟಸ್ಥ ಸ್ಥಳದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಗರಿಷ್ಠ ರನ್ ಗಳಿಸಿದ ನಿಯೋಜಿತ ವಿಕೆಟ್ಕೀಪರ್ ಎನಿಸಿಕೊಂಡಿರುವ ರಿಷಭ್ ಪಂತ್ ಲೆಜೆಂಡರಿ ಎಂ.ಎಸ್. ಧೋನಿ ಅವರ ದಾಖಲೆಯನ್ನು ಮುರಿದರು.
ಕೊಲಂಬೊದಲ್ಲಿ ಸೋಮವಾರ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಪಂತ್ 2,500 ರನ್ ಗಳಿಸಿದ್ದು, ಧೋನಿ(2,496)ದಾಖಲೆಯನ್ನು ಹಿಂದಿಕ್ಕಿದರು. ಪಂತ್ ಸುಮಾರು 42ರ ಸರಾಸರಿಯಲ್ಲಿ ಈ ಸಾಧನೆ ಮಾಡಿದ್ದರೆ, ಧೋನಿ 32.84ರ ಸರಾಸರಿಯಲ್ಲಿ ಈ ಸಾಧನೆಗೈದಿದ್ದರು.
ಭಾರತದ ಮಾಜಿ ವಿಕೆಟ್ಕೀಪರ್ ಫಾರೂಕ್ ಇಂಜಿನಿಯರ್ 32.67ರ ಸರಾಸರಿಯಲ್ಲಿ 1,209 ರನ್ ಗಳಿಸಿ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಆ ನಂತರ ಸಯ್ಯದ್ ಕೀರ್ಮಾನಿ(1,109 ರನ್)ಹಾಗೂ ಕಿರಣ್ ಮೋರೆ(901 ರನ್)ಅವರಿದ್ದಾರೆ.
ನೋವಿನಲ್ಲೂ ಬ್ಯಾಟಿಂಗ್ ಮಾಡಿದ ಪಂತ್: ಎಸ್ಎಸ್ಸಿ ಮೈದಾನದಲ್ಲಿ ಮೊದಲ ದಿನದಾಟವಾದ ರವಿವಾರ ಶ್ರೀಲಂಕಾದ ವೇಗಿ ಲಹಿರು ಕುಮಾರ ಅವರು ಎಸೆದ ಚೆಂಡು ಪಂತ್ ಅವರ ಎಡಗೈ ಮಣಿಕಟ್ಟಿಗೆ ತಗಲಿ ಗಾಯವಾಗಿತ್ತು. ಪಂತ್ ಅವರು ಎಸೆತವನ್ನು ಸ್ಕ್ವಾರ್ನತ್ತ ಅಟ್ಟುವ ಪ್ರಯತ್ನದಲ್ಲಿದ್ದಾಗ ಚೆಂಡು ಕೈಗೆ ತಗಲಿದೆ. ಭಾರತೀಯ ಟೀಮ್ ಫಿಜಿಯೋ ಮೊದಲಿಗೆ ಐಸ್ ಪ್ಯಾಕ್ ಇಟ್ಟರು. ನಂತರ ಪಂತ್ ಕೈಗೆ ಬ್ಯಾಂಡೇಜ್ ಹಾಕಿದರು.
15 ಎಸೆತಗಳಲ್ಲಿ ಕೇವಲ ಮೂರು ರನ್ ಗಳಿಸಿದ ನಂತರ ಪಂತ್ ಗಾಯಗೊಂಡು ಮೈದಾನವನ್ನು ತೊರೆದರು.
ಸೋಮವಾರ ಭಾರತದ ಆರನೇ ವಿಕೆಟ್ ಪತನಗೊಂಡಾಗ ಮತ್ತೊಮ್ಮೆ ಬ್ಯಾಟಿಂಗ್ಗೆ ಇಳಿದ ಪಂತ್ ಅವರು ಧ್ರುವ ಜುರೆಲ್ ಜೊತೆ ಕೈಜೋಡಿಸಿ ಇನಿಂಗ್ಸ್ ಆಧರಿಸಿದರು. ಫೆರ್ನಾಂಡೊ ಅವರು ಪದೇ ಪದೇ ಶಾರ್ಟ್ ಪಿಚ್ ಎಸೆತಗಳ ಮೂಲಕ ಪಂತ್ರನ್ನು ಪರೀಕ್ಷಿಸಿದರು.
28ರ ವಯಸ್ಸಿನ ಪಂತ್ ಅವರು 89 ಎಸೆತಗಳಲ್ಲಿ 6 ಬೌಂಡರಿ,2 ಸಿಕ್ಸರ್ ಸಹಿತ 63 ರನ್ ಗಳಿಸಿ ನುವಾಂಥಗೆ ವಿಕೆಟ್ ಒಪ್ಪಿಸಿದರು.
ವಿದೇಶ/ತಟಸ್ಥ ತಾಣದಲ್ಲಿ ಗರಿಷ್ಠ ರನ್ ಗಳಿಸಿದ ಭಾರತದ ವಿಕೆಟ್ಕೀಪರ್ಗಳು
2,501-ರಿಷಭ್ ಪಂತ್
2,496-ಎಂ.ಎಸ್. ಧೋನಿ
1,209-ಫಾರೂಕ್ ಇಂಜಿನಿಯರ್
1,109-ಸಯ್ಯದ್ ಕೀರ್ಮಾನಿ
901-ಕಿರಣ್ ಮೋರೆ






