15 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಗೆ ರಿಷಭ್ ಪಂತ್ ಸೇರ್ಪಡೆ

ರಿಷಭ್ ಪಂತ್ | Photo Credit : PTI
ಲಕ್ನೊ, ಜೂ.23: 2027ರ ಆವೃತ್ತಿಯ ಐಪಿಎಲ್ ಗಿಂತ ಮೊದಲು ನಡೆದ ಮೊದಲ ಟ್ರೇಡ್ ಪ್ರಕ್ರಿಯೆಯಲ್ಲಿ ಲಕ್ನೊ ಸೂಪರ್ ಜಯಂಟ್ಸ್ ತಂಡವು ನಾಯಕ ರಿಷಭ್ ಪಂತ್ ಅವರನ್ನು ಅವರ ಮಾಜಿ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ಗೆ ವಾಪಸ್ ಕಳುಹಿಸಿದೆ. ಪಂತ್ ಬದಲಿಗೆ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
2025ರ ಮೆಗಾ ಹರಾಜಿನಲ್ಲಿ 27 ಕೋಟಿ ರೂ.ಗೆ ಲಕ್ನೊ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಪಂತ್, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಾಗಿದ್ದರು. ಇದೀಗ 15 ಕೋ.ರೂ. ಪರಿಷ್ಕೃತ ವೇತನದೊಂದಿಗೆ ಡೆಲ್ಲಿ ತಂಡಕ್ಕೆ ವಾಪಸಾಗಲಿದ್ದಾರೆ. ಕುಲದೀಪ್ 13.5 ಕೋಟಿ ರೂ. ಗುತ್ತಿಗೆಗೆ ಲಕ್ನೊ ತಂಡವನ್ನು ಸೇರಲಿದ್ದಾರೆ.
ಪಂತ್ ಅವರು ಪ್ರತಿಷ್ಠಿತ ಐಪಿಎಲ್ ಟ್ರೇಡ್ನ ಭಾಗವಾಗಿ ವೇತನ ಕಡಿತವನ್ನು ಸ್ವೀಕರಿಸಿದ ಎರಡನೇ ಪ್ರಮುಖ ಆಟಗಾರನಾಗಿದ್ದಾರೆ. 2026ರ ಋತುವಿಗಿಂತ ಮೊದಲು ಸಿಎಸ್ಕೆ ತಂಡವು ರವೀಂದ್ರ ಜಡೇಜ ಬದಲಿಗೆ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರನ್ನು ತನ್ನೊಂದಿಗೆ ಸೇರಿಸಿಕೊಂಡಿತ್ತು. ಜಡೇಜ ಅವರ ಸಂಭಾವನೆ 18 ಕೋಟಿ ರೂ.ನಿಂದ 14 ಕೋಟಿ ರೂ.ಗೆ ಇಳಿಕೆಯಾಗಿತ್ತು.




