Glasgow 2026 Commonwealth Games | ವೇಟ್ಲಿಫ್ಟಿಂಗ್ ನಲ್ಲಿ ಬೆಳ್ಳಿ ಗೆದ್ದ ಋಷಿಕಾಂತ್ ಸಿಂಗ್

Photo : PTI
ಗ್ಲಾಸ್ಗೊ, ಜು. 26: ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್–2026ರಲ್ಲಿ ವೇಟ್ಲಿಫ್ಟರ್ ಋಷಿಕಾಂತ್ ಸಿಂಗ್ ಚನಂಬಮ್ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟಿದ್ದಾರೆ. ಪುರುಷರ ವೇಟ್ಲಿಫ್ಟಿಂಗ್ನ 60 ಕೆಜಿ ವಿಭಾಗದಲ್ಲಿ ಒಟ್ಟು 264 ಕೆಜಿ ಭಾರ ಎತ್ತಿ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.
ಸ್ನ್ಯಾಚ್ ವಿಭಾಗದಲ್ಲಿ 121 ಕೆಜಿ ಭಾರ ಎತ್ತಿ ಕೂಟದ ದಾಖಲೆ ನಿರ್ಮಿಸಿದ ಋಷಿಕಾಂತ್, ಕ್ಲೀನ್ ಆ್ಯಂಡ್ ಜರ್ಕ್ ನಲ್ಲಿ ತಮ್ಮ ಏಕೈಕ ಯಶಸ್ವಿ ಪ್ರಯತ್ನದಲ್ಲಿ 143 ಕೆಜಿ ಎತ್ತಿದರು.
ಆದರೆ, ಮಲೇಶ್ಯದ ಮುಹಮ್ಮದ್ ಅನಿಕ್ ಬಿನ್ ಕಸ್ದನ್ ಕ್ಲೀನ್ ಆ್ಯಂಡ್ ಜರ್ಕ್ ವಿಭಾಗದಲ್ಲಿ 152 ಕೆಜಿ ಹಾಗೂ ಒಟ್ಟು 273 ಕೆಜಿ ಭಾರ ಎತ್ತಿ ಎರಡೂ ವಿಭಾಗಗಳಲ್ಲಿ ಕೂಟದ ದಾಖಲೆ ನಿರ್ಮಿಸಿದರು. ಅವರ ಸಾಧನೆಯು ಚಿನ್ನದ ಪದಕಕ್ಕೆ ಅರ್ಹವಾಯಿತು. ಹಾಗಾಗಿ, ಋಷಿಕಾಂತ್ ಬೆಳ್ಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಕೆನ್ಯಾದ ಜೋಶುವಾ ಅಮುಂಗಾ ಎಂಬೋಯಾ ಒಟ್ಟು 260 ಕೆಜಿ (115 ಕೆಜಿ + 145 ಕೆಜಿ) ಭಾರ ಎತ್ತಿ ಕಂಚಿನ ಪದಕ ಪಡೆದರು.
► ಋಷಿಕಾಂತ್ ಯಾರು?
ಮಣಿಪುರದ ಇಂಫಾಲ್ ವೆಸ್ಟ್ನಲ್ಲಿ ಬೆಳೆದ ಋಷಿಕಾಂತ್, ಭಾರತೀಯ ಸೇನೆಯ ಕ್ರೀಡಾ ಕಾರ್ಯಕ್ರಮದಡಿ ತರಬೇತಿ, ಮಾರ್ಗದರ್ಶನ ಮತ್ತು ನೆರವು ಪಡೆದಿದ್ದಾರೆ. ಪ್ರಸ್ತುತ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರ ಕ್ರೀಡಾಜೀವನಕ್ಕೆ ಮಹತ್ವದ ತಿರುವು ಬಂದಿದ್ದು, ಅಹ್ಮದಾಬಾದ್ನಲ್ಲಿ ನಡೆದ 2025ರ ಕಾಮನ್ವೆಲ್ತ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ. ಅಲ್ಲಿ ಅವರು 60 ಕೆಜಿ ವಿಭಾಗದಲ್ಲಿ ಒಟ್ಟು 271 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದರು.
ಅದು ನೂತನ ರಾಷ್ಟ್ರೀಯ ದಾಖಲೆಯಾಗಿತ್ತು. ಈ ಸಾಧನೆಯ ಮೂಲಕ ಗ್ಲಾಸ್ಗೊದಲ್ಲಿ ನಡೆಯಲಿರುವ 2026ರ ಕಾಮನ್ವೆಲ್ತ್ ಗೇಮ್ಸ್ಗೆ ಅವರು ನೇರ ಅರ್ಹತೆ ಪಡೆದುಕೊಂಡರು.
ಈ ಬಾರಿಯ ಕಾಮನ್ವೆಲ್ತ್ ಗೇಮ್ಸ್ ಋಷಿಕಾಂತ್ ಅವರ ಎರಡನೆಯದಾಗಿದೆ. ಹೊಸದಾಗಿ ಪರಿಚಯಿಸಲಾದ 60 ಕೆಜಿ ವಿಭಾಗಕ್ಕೆ ವರ್ಗಾವಣೆಗೊಳ್ಳುವ ಮೊದಲು ಅವರು ಬರ್ಮಿಂಗ್ಹ್ಯಾಮ್–2022ರಲ್ಲಿ ಪುರುಷರ 55 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
► ಭಾರತದ 2ನೇ ಪದಕ
ಪ್ರಸ್ತುತ ನಡೆಯುತ್ತಿರುವ ಗೇಮ್ಸ್ನಲ್ಲಿ ಇದು ಭಾರತದ ಎರಡನೇ ಪದಕವಾಗಿದೆ. ಇದಕ್ಕೂ ಮೊದಲು, ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಜಂಡು ಕುಮಾರ್ ಕಂಚಿನ ಪದಕ ಗೆದ್ದು ಭಾರತದ ಪದಕದ ಖಾತೆ ತೆರೆದಿದ್ದರು.






