ರೈಸಿಂಗ್ ಸ್ಟಾರ್ಸ್ ಏಶ್ಯ ಕಪ್ 2025 ಪಂದ್ಯಾವಳಿ | ಸೂಪರ್ ಓವರ್ ನಲ್ಲಿ ಭಾರತ ‘ಎ’ ಸೋಲಿಸಿ ಫೈನಲ್ ಗೇರಿದ ಬಾಂಗ್ಲಾದೇಶ ‘ಎ’

Photo Credit : @abubakartarar_
ದೋಹಾ. ನ. 21: ದೋಹಾದಲ್ಲಿ ನಡೆಯುತ್ತಿರುವ ರೈಸಿಂಗ್ ಸ್ಟಾರ್ಸ್ ಏಶ್ಯ ಕಪ್ 2025 ಪಂದ್ಯಾವಳಿಯಲ್ಲಿ ಶುಕ್ರವಾರ ಸೂಪರ್ ಓವರ್ ನಲ್ಲಿ ಭಾರತ ಎ ತಂಡವನ್ನು ಸೋಲಿಸಿದ ಬಾಂಗ್ಲಾದೇಶ ಎ ತಂಡ ಫೈನಲ್ ಪ್ರವೇಶಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಎ 20 ಓವರ್ ಗಳಲ್ಲಿ ಆರು ವಿಕೆಟ್ ಗಳ ನಷ್ಟಕ್ಕೆ 194 ರನ್ ಗಳಿಸಿತು.
ಬಳಿಕ, ಗೆಲ್ಲಲು 195 ರನ್ ಗಳ ಗುರಿಯನ್ನು ಪಡದ ಜಿತೇಶ್ ಶರ್ಮಾ ನೇತೃತ್ವದ ಭಾರತ ಎ ತಂಡವೂ 20 ಓವರ್ ಗಳಲ್ಲಿ ಆರು ವಿಕೆಟ್ ಗಳ ನಷ್ಟಕ್ಕೆ 194 ರನ್ ಗಳಿಸಿತು.
ಆಗ ಫಲಿತಾಂಶವನ್ನು ನಿರ್ಧರಿಸಲು ಸೂಪರ್ ಓವರ್ ತರಲಾಯಿತು.
ಸೂಪರ್ ಓವರ್ ನಲ್ಲಿ ಜಿತೇಶ್ ಶರ್ಮಾ ಮತ್ತು ಆಶುತೋಷ್ ಶರ್ಮಾ ಶೂನ್ಯಕ್ಕೆ ಔಟಾದರು. ಹಾಗಾಗಿ, ಗೆಲ್ಲಲು ಬಾಂಗ್ಲಾದೇಶ ಕೇವಲ ಒಂದು ರನ್ ಮಾಡಬೇಕಾಗಿತ್ತು. ಬಾಂಗ್ಲಾದೇಶವು ಮೊದಲ ಎಸೆತದಲ್ಲೇ ಯಾಸಿರ್ ಅಲಿ ವಿಕೆಟ್ ಕಳೆದುಕೊಂಡರೂ, ಗೆಲ್ಲಲು ಬೇಕಾದ ಒಂದು ರನ್ನನ್ನು ಲೆಗ್ ಸ್ಪಿನ್ನರ್ ಸುಯಶ್ ಶರ್ಮಾ ಎಸೆದ ಓವರ್ ನಲ್ಲಿ ವೈಡ್ ಮೂಲಕ ಗಳಿಸಿ ಫೈನಲ್ಗೆ ತೇರ್ಗಡೆಯಾಯಿತು.
ಇದಕ್ಕೂ ಮೊದಲು, ಭಾರತೀಯ ಇನಿಂಗ್ಸ್ನಲ್ಲಿ ವೈಭವ್ ಸೂರ್ಯವಂಶಿ 15 ಎಸೆತಗಳಲ್ಲಿ 38 ರನ್ ಮತ್ತು ಪ್ರಿಯಾಂಶ್ ಆರ್ಯ 23 ಎಸೆತಗಳಲ್ಲಿ 44 ರನ್ ಗಳನ್ನು ಸಿಡಿಸಿದರು. ಜಿತೇಶ್ ಶರ್ಮಾ 33 ರನ್ ಗಳನ್ನು ಗಳಿಸಿದರೆ, ನೇಹಲ್ ವದೇರ 32 ರನ್ ಗಳಿಸಿ ಅಜೇಯವಾಗಿ ಉಳಿದರು.
ಬಾಂಗ್ಲಾದೇಶ ಇನಿಂಗ್ಸ್ನಲ್ಲಿ, ಆರಂಭಿಕ ಬ್ಯಾಟರ್ ಹಬೀಬುರ್ ರಹ್ಮಾನ್ 46 ಎಸೆತಗಳಲ್ಲಿ 65 ರನ್ ಗಳನ್ನು ಗಳಿಸಿದರು. ಮೆಹಬೂಬ್ 18 ಎಸೆಗಳಲ್ಲಿ 48 ರನ್ ಸಿಡಿಸಿ ಅಜೇಯವಾಗುಳಿದರು.
ಫೈನಲ್ ಪಂದ್ಯ ರವಿವಾರ ನಡೆಯಲಿದೆ.







