ರೈಸಿಂಗ್ ಸ್ಟಾರ್ಸ್ ಏಶ್ಯ ಕಪ್ | 15 ಸಿಕ್ಸರ್ ಸಿಡಿಸಿದ ಸೂರ್ಯವಂಶಿ!

ವೈಭವ್ ಸೂರ್ಯವಂಶಿ |Photo Credit : PTI
ಹೊಸದಿಲ್ಲಿ, ನ.14: ದೋಹಾದಲ್ಲಿ ಶುಕ್ರವಾರ ನಡೆದ ಎಸಿಸಿ ಪುರುಷರ ರೈಸಿಂಗ್ ಸ್ಟಾರ್ಸ್ ಏಶ್ಯಕಪ್ ಟೂರ್ನಿಯಲ್ಲಿ 15 ಸಿಕ್ಸರ್ ಗಳ ಸಹಿತ ಕೇವಲ 42 ಎಸೆತಗಳಲ್ಲಿ 144 ರನ್ ಗಳಿಸಿದ ವೈಭವ್ ಸೂರ್ಯವಂಶಿ ಭಾರತ ‘ಎ’ ತಂಡವು ಯುಎಇ ತಂಡದ ವಿರುದ್ಧ 4 ವಿಕೆಟ್ ಗಳ ನಷ್ಟಕ್ಕೆ 297 ರನ್ ಗಳಿಸುವಲ್ಲಿ ನೆರವಾದರು.
ನಿರ್ಭಿತಿಯ ಬ್ಯಾಟಿಂಗ್ ನಿಂದ ಯುಎಇ ಬೌಲರ್ ಗಳನ್ನು ಬೆಂಡೆತ್ತಿದ ಸೂರ್ಯವಂಶಿ ಕೇವಲ 32 ಎಸೆತಗಳಲ್ಲಿ ಶತಕ ಪೂರೈಸಿದರು.
ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡವು ಪ್ರಿಯಾಂಶ್ ಆರ್ಯ(10 ರನ್)ವಿಕೆಟನ್ನು ಬೇಗನೆ ಕಳೆದುಕೊಂಡಿತು. ಕೇವಲ 42 ಎಸೆತಗಳಲ್ಲಿ 11 ಬೌಂಡರಿ ಹಾಗೂ 15 ಸಿಕ್ಸರ್ ಗಳ ಸಹಿತ 144 ರನ್ ಗಳಿಸಿದ ಸೂರ್ಯವಂಶಿ ಅವರು ನಮನ್ ಧೀರ್(34 ರನ್)ಅವರೊಂದಿಗೆ ಕೇವಲ 57 ಎಸೆತಗಳಲ್ಲಿ 163 ರನ್ ಜೊತೆಯಾಟ ನಡೆಸಿದರು. ಸೂರ್ಯವಂಶಿ 12.3 ಓವರ್ ಗಳಲ್ಲಿ ಔಟಾದಾಗ ಭಾರತ ‘ಎ’ ತಂಡವು 3 ವಿಕೆಟ್ಗಳ ನಷ್ಟಕ್ಕೆ 195 ರನ್ ಗಳಿಸಿತು. ನಾಯಕ ಹಾಗೂ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಕೇವಲ 32 ಎಸೆತಗಳಲ್ಲಿ ಔಟಾಗದೆ 83 ರನ್ ಕಲೆ ಹಾಕಿದರು. ಶರ್ಮಾ ಇನಿಂಗ್ಸ್ನಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ಗಳಿದ್ದವು.





