ಸೂರ್ಯವಂಶಿ ಏಕಾಂಗಿ ಹೋರಾಟ ವ್ಯರ್ಥ : ಪಾಕಿಸ್ತಾನಕ್ಕೆ ಜಯ

Photo : screengrab
ಹೊಸದಿಲ್ಲಿ: ಭಾರತ ಕ್ರಿಕೆಟ್ನ ಉದಯೋನ್ಮುಖ ತಾರೆ ವೈಭವ ಸೂರ್ಯವಂಶಿ ಹಿಂದಿನ ಪಂದ್ಯದಲ್ಲಿ ದಾಖಲೆ ಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರೆ, ಭಾನುವಾರ ನಡೆದ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಪಂದ್ಯದಲ್ಲಿ 28 ಎಸೆತಗಳಲ್ಲಿ 45 ರನ್ ಸಿಡಿಸಿದರು. ಆದರೆ ಅವರ ಏಕಾಂಗಿ ಹೋರಾಟ ಭಾರತ ತಂಡವನ್ನು ಗೆಲುವಿನ ದಡ ಸೇರಿಸಲು ಸಾಕಾಗಲಿಲ್ಲ. ಪಾಕಿಸ್ತಾನ್ ಶಹೀನ್ಸ್ ತಂಡ ಭಾರತ ʼಎʼ ವಿರುದ್ಧದ ಪಂದ್ಯವನ್ನು ಇನ್ನೂ 40 ಎಸೆತಗಳಿರುವಂತೆ ಗೆದ್ದುಕೊಂಡಿತು. ಭಾರತ ನೀಡಿದ 137 ರನ್ಗಳ ಗುರಿಯನ್ನು ಕೇವಲ 13.2 ಓವರ್ ಗಳಲ್ಲಿ ತಲುಪಿ ಗೆಲುವಿನ ನಗೆ ಬೀರಿತು.
ಮೊದಲು ಬ್ಯಾಟ್ ಮಾಡಿದ ಭಾರತ ʼಎʼ ತಂಡ ಸ್ಪರ್ಧಾತ್ಮಕ ಮೊತ್ತವನ್ನೇನೋ ತಲುಪಿತು. 20 ಎಸೆತಗಳಲ್ಲಿ 35 ರನ್ ಸಿಡಿಸಿದ ನಮನ್ ಧೀರ್ ಉತ್ತಮ ಸಾಥ್ ನೀಡಿದರು. ಆದರೆ 3 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿದ್ದ ಭಾರತ ದಿಢೀರ್ ಕುಸಿತ ಕಂಡು 45 ರನ್ ಅಂತರದಲ್ಲಿ ಉಳಿದ ಏಳು ವಿಕೆಟ್ ಕಳೆದುಕೊಂಡಿತು. ಶಹೀದ್ ಅಝೀಝ್ 3 ವಿಕೆಟ್ ಕಬಳಿಸಿದರೆ, ಸಾದ್ ಮಸೂದ್ ಮತ್ತು ಮಾಝ್ ಸದಕತ್ ತಲಾ ಎರಡು ವಿಕೆಟ್ ಕಿತ್ತರು. ಸೂರ್ಯವಂಶಿ ತಮ್ಮ ಎಂದಿನ ಶೈಲಿಯಲ್ಲಿ 160ಕ್ಕೂ ಹೆಚ್ಚು ಸ್ಟ್ರೈಕ್ರೇಟ್ನೊಂದಿಗೆ ಬೌಂಡರಿ, ಸಿಕ್ಸರ್ಗಳನ್ನು ಬಾರಿಸಿ ಗಮನ ಸೆಳೆದರು. ಆದರೆ ಸೂಫಿಯನ್ ಅವರ ಎಸೆತವನ್ನು ಸೂರ್ಯವಂಶಿ ಲಾಂಗ್ಆನ್ಗೆ ಬಾರಿಸಿದಾಗ ಮೊಹ್ಮದ್ ಫೈಕ್ ಅದ್ಭುತವಾಗಿ ಹಿಡಿಯುವ ಮೂಲಕ ಪಾಕಿಸ್ತಾನದ ಮೇಲುಗೈಗೆ ಕಾರಣರಾದರು.
ಪಾಕ್ ಪರ ಆರಂಭಿಕ ಆಟಗಾರರಾದ ಮಾಝ್ ಅದಾಕತ್ 47 ಎಸೆತಗಳಲ್ಲಿ 79 ರನ್ ಸಿಡಿಸಿದರು. ಎಡಗೈ ಸ್ಪಿನ್ ಬೌಲಿಂಗ್ನಲ್ಲಿ ಎರಡು ವಿಕೆಟ್ ಕಿತ್ತಿದ್ದ ಅವರಿಗೆ ಸಹಜವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.







