ನಿಧಾನಗತಿಯ ಬೌಲಿಂಗ್ : ಋತುರಾಜ್ ಗಾಯಕ್ವಾಡ್ಗೆ ದಂಡ

ಋತುರಾಜ್ ಗಾಯಕ್ವಾಡ್ | Photo Credit : PTI
ಚೆನ್ನೈ, ಮೇ 22: ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಗುರುವಾರ ನಡೆದ 2026ರ ಆವೃತ್ತಿಯ ಐಪಿಎಲ್ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಋತುರಾಜ್ ಗಾಯಕ್ವಾಡ್ಗೆ ದಂಡ ವಿಧಿಸಲಾಗಿದೆ.
ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ 89 ರನ್ಗಳ ಅಂತರದಿಂದ ಜಯಶಾಲಿಯಾಗಿ ಅಗ್ರ-2ರಲ್ಲಿ ಸ್ಥಾನ ಪಡೆದಿರುವ ಗುಜರಾತ್ ತಂಡವು ಪ್ಲೇ ಆಫ್ಗೆ ತೇರ್ಗಡೆಯಾಗಿದೆ. ಈ ಸೋಲಿನ ಮೂಲಕ ಸಿಎಸ್ಕೆ ತಂಡವು ಅಗ್ರ-4 ಸ್ಪರ್ಧೆಯಿಂದ ಅಧಿಕೃತವಾಗಿ ನಿರ್ಗಮಿಸಿದೆ.
ಐದು ಬಾರಿಯ ಚಾಂಪಿಯನ್ ಸಿಎಸ್ಕೆ ಸತತ ಮೂರನೇ ಋತುವಿನಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.
‘ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22ರ ಅಡಿಯಲ್ಲಿ, ನಿಧಾನಗತಿಯ ಓವರ್ನ ತಪ್ಪಿಗೆ ಸಂಬಂಧಿಸಿದಂತೆ ಇದು ಗಾಯಕ್ವಾಡ್ ನಾಯಕತ್ವದ ತಂಡದ ಎರಡನೇ ಅಪರಾಧವಾಗಿದೆ. 18ನೇ ಪಂದ್ಯದಲ್ಲಿ ಮೊದಲ ಬಾರಿ ಈ ತಪ್ಪೆಸಗಿತ್ತು. ಹೀಗಾಗಿ ಗಾಯಕ್ವಾಡ್ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ’ ಎಂದು ಶುಕ್ರವಾರ ಬಿಡುಗಡೆಯಾದ ಐಪಿಎಲ್ ಮಾಧ್ಯಮ ಸಲಹಾ ಸಂಸ್ಥೆ ತಿಳಿಸಿದೆ.
ಇಂಪ್ಯಾಕ್ಟ್ ಪ್ಲೇಯರ್ ಸಹಿತ ಆಡುವ 11ರ ಬಳಗದ ಉಳಿದ ಸದಸ್ಯರುಗಳು 6 ಲಕ್ಷ ರೂ. ದಂಡ ಅಥವಾ ಪಂದ್ಯಶುಲ್ಕದಲ್ಲಿ ಶೇ.25ರಷ್ಟು ದಂಡ ತೆರಬೇಕಾಗಿದೆ.






