ಪಾಕ್ ಏಕದಿನ ಕ್ರಿಕೆಟ್ ನಾಯಕತ್ವದಿಂದ ರಿಝ್ವಾನ್ ಹೊರಗೆ?

ಮುಹಮ್ಮದ್ ರಿಝ್ವಾನ್ | PC : PTI
ಲಾಹೋರ್: ಮುಂಬರುವ ದಿನಗಳಲ್ಲಿ ಪಾಕಿಸ್ತಾನಿ ಕ್ರಿಕೆಟ್ನಲ್ಲಿ ನಾಯಕತ್ವ ಬದಲಾವಣೆಯ ಸಾಧ್ಯತೆಗಳಿವೆ. ಏಕದಿನ ಕ್ರಿಕೆಟ್ ತಂಡದ ನಾಯಕತ್ವ ಮತ್ತು ಇತರ ವಿಷಯಗಳ ಬಗ್ಗೆ ಚರ್ಚಿಸಲು ಸಭೆಯೊಂದನ್ನು ಏರ್ಪಡಿಸುವಂತೆ ಕೋರಿ ಪಾಕಿಸ್ತಾನದ ಪ್ರಧಾನ ಕೋಚ್ ಮೈಕ್ ಹೆಸನ್ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ಪತ್ರವೊಂದನ್ನು ಬರೆದಿದ್ದಾರೆ ಎಂದುದ ಪಿಟಿಐ ವರದಿ ಮಾಡಿದೆ.
50 ಓವರ್ಗಳ ಕ್ರಿಕೆಟ್ನಲ್ಲಿ ಪಾಕಿಸ್ತಾನದ ಇತ್ತೀಚಿನ ಕಳಪೆ ಫಲಿತಾಂಶದ ಹಿನ್ನೆಲೆಯಲ್ಲಿ, ಹಾಲಿ ನಾಯಕ ಮುಹಮ್ಮದ್ ರಿಝ್ವಾನ್ರ ನಾಯಕತ್ವವು ಪರಿಶೀಲನೆಗೆ ಒಳಪಟ್ಟಿದೆ. ಸ್ವದೇಶದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಪಾಕಿಸ್ತಾನವು ಗುಂಪು ಹಂತದಲ್ಲೇ ನಿರ್ಗಮಿಸಿರುವುದು ಪಾಕಿಸ್ತಾನಿ ಕ್ರಿಕೆಟ್ಗೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ.
ಆಯ್ಕೆಗಾರರು ಮತ್ತು ಸಲಹೆಗಾರರೊಂದಿಗೆ ಸೋಮವಾರ ಸಭೆ ಏರ್ಪಡಿಸುವಂತೆ ನಖ್ವಿ ಸೂಚಿಸಿದ್ದಾರೆ ಎಂದು ವರದಿ ತಿಳಿಸಿದೆ. ಈ ಸಭೆಯ ಪ್ರಮುಖ ವಿಷಯ ನಾಯಕತ್ವದ ಬಗ್ಗೆ ಚರ್ಚಿಸುವುದೇ ಆಗಿದೆ ಎನ್ನಲಾಗಿದೆ. ರಿಝ್ವಾನ್ ನಾಯಕತ್ವವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿ ಹೇಳುತ್ತದೆ.
‘‘ಏಕದಿನ ತಂಡದ ನಾಯಕತ್ವದ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ. ಈ ವಿಷಯವನ್ನು ಚರ್ಚಿಸಲು ಸೋಮವಾರ ಸಭೆ ಸೇರುವಂತೆ ಆಯ್ಕೆಗಾರರು ಮತ್ತು ಸಲಹೆಗಾರರಿಗೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಸೂಚನೆ ನೀಡಿದ್ದಾರೆ’’ ಎಂದು ಪಿಸಿಬಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
38 ವರ್ಷ ವಯಸ್ಸಿನಲ್ಲಿ ಪಾಕ್ ಪರವಾಗಿ ಟೆಸ್ಟ್ಗೆ ಪಾದಾರ್ಪಣೆ ಮಾಡಿದ ಸ್ಪಿನ್ನರ್
ದಕ್ಷಿಣ ಆಫ್ರಿಕ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆಡಲು 38 ವರ್ಷದ ಎಡಗೈ ಸ್ಪಿನ್ನರ್ ಆಸಿಫ್ ಅಫ್ರಿದಿಗೆ ಪಾಕಿಸ್ತಾನವು ಟೆಸ್ಟ್ ಕ್ಯಾಪ್ ನೀಡಿದೆ. ಪಂದ್ಯವು ಸೋಮವಾರ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಆರಂಭವಾಗಿದೆ.
ಅನುಭವಿ ಅಬ್ರಾರ್ ಅಹ್ಮದ್ರನ್ನು ಬದಿಗೆ ಸರಿಸಿ ಅಫ್ರಿದಿಯನ್ನು ತಂಡಕ್ಕೆ ಸೇರಿಸಲಾಗಿದೆ. ಅವರು ನಿಯಮಿತ ಸ್ಪಿನ್ನರ್ಗಳಾದ ನೊಮನ್ ಅಲಿ ಮತ್ತು ಆಫ್ ಸ್ಪಿನ್ನರ್ ಸಾಜಿದ್ ಖಾನ್ ಜೊತೆಗೆ ತಂಡದ ಸ್ಪಿನ್ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಾರೆ.
ಅಫ್ರಿದಿಗೆ ದೇಶಿ ಕ್ರಿಕೆಟ್ನಲ್ಲಿ ಸ್ಪಾಟ್ ಫಿಕ್ಸಿಂಗ್ನಲ್ಲಿ ಶಾಮೀಲಾದ ಆರೋಪದಲ್ಲಿ ಒಂದು ವರ್ಷದ ನಿಷೇಧ ವಿಧಿಸಲಾಗಿತ್ತು. ಆರು ತಿಂಗಳು ನಿಷೇಧ ಅನುಭವಿಸಿದ ಬಳಿಕ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ನಿಷೇಧವನ್ನು ತೆರವುಗೊಳಿಸಿತ್ತು.
38 ವರ್ಷ ಮತ್ತು 299 ದಿನಗಳ ವಯಸ್ಸಿನ ಆಸಿಫ್ ಪಾಕಿಸ್ತಾನದ ಪರವಾಗಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಎರಡನೇ ಅತಿ ಹಿರಿಯ ಆಟಗಾರನಾಗಿದ್ದಾರೆ. ಅವರಿಗೂ ಮೊದಲು, 1955ರಲ್ಲಿ ಮಿರಾನ್ ಬಕ್ಷ್ 47 ವರ್ಷ ಪ್ರಾಯದಲ್ಲಿ ಪಾಕಿಸ್ತಾನ ಪರವಾಗಿ ತನ್ನ ಚೊಚ್ಚಲ ಟೆಸ್ಟನ್ನು ಭಾರತದ ವಿರುದ್ಧ ಆಡಿದ್ದರು.
ಎರಡನೇ ಟೆಸ್ಟ್ನಲ್ಲಿ ಪಾಕಿಸ್ತಾನಿ ತಂಡದಲ್ಲಿ ಅಫ್ರಿದಿ ಸೇರಿದಂತೆ ಇಬ್ಬರು ಎಡಗೈ ಸ್ಪಿನ್ನರ್ಗಳು ಆಡುತ್ತಿದ್ದಾರೆ. ಇನ್ನೊಬ್ಬ ಎಡಗೈ ಸ್ಪಿನ್ನರ್ ನೊಮನ್ ಅಲಿ ಲಾಹೋರ್ನಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಟೆಸ್ಟ್ನಲ್ಲಿ 10 ವಿಕೆಟ್ ಪಡೆದಿದ್ದಾರೆ. ಆ ಪಂದ್ಯವನ್ನು ಪಾಕಿಸ್ತಾನವು 94 ರನ್ಗಳಿಂದ ಜಯಿಸಿದೆ.







