ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕೋಚ್ ಆಗಿ ರಾಬಿನ್ ಉತ್ತಪ್ಪ ; ಮಿಚೆಲ್ ಮೆಕ್ಲೆನಾಗನ್ ಬೌಲಿಂಗ್ ಕೋಚ್

ರಾಬಿನ್ ಉತ್ತಪ್ಪ | Photo Credit : PTI
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2027ರ ಮಿನಿ ಹರಾಜಿಗೂ ಮುನ್ನ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತನ್ನ ತರಬೇತಿ ಸಿಬ್ಬಂದಿ ಬಳಗವನ್ನು ಸಂಪೂರ್ಣವಾಗಿ ಪುನಾರಚಿಸುತ್ತಿದೆ. ಅದರ ಭಾಗವಾಗಿ, ರಾಬಿನ್ ಉತ್ತಪ್ಪರನ್ನು ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಗಿದೆ.
ಭಾರತದ 2007ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಉತ್ತಪ್ಪ, ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಯಶಸ್ವಿ ಬ್ಯಾಟರ್ ಆಗಿದ್ದರು. ಅವರು ಆ ತಂಡದ ಪರವಾಗಿ 2019ರವರೆಗೆ 86 ಪಂದ್ಯಗಳನ್ನು ಆಡಿ, 136ರ ಸ್ಟ್ರೈಕ್ ರೇಟ್ನಲ್ಲಿ ಸುಮಾರು 2,500 ರನ್ಗಳನ್ನು ಗಳಿಸಿದ್ದರು.
ಬಳಿಕ, ಅವರು 2020ರ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ತೆರಳಿದರು ಹಾಗೂ 2022ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿ ತನ್ನ ಐಪಿಎಲ್ ವೃತ್ತಿಜೀವನಕ್ಕೆ ತೆರೆ ಎಳೆದರು. ಅದೇ ವರ್ಷದಲ್ಲಿ, ಅವರು ದೇಶಿ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಮಾದರಿಗಳಿಂದ ನಿವೃತ್ತಿ ಘೋಷಿಸಿದರು.
ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಪ್ಪ ಸೇರಿದಂತೆ ಒಟ್ಟು ನಾಲ್ಕು ಹೊಸ ನೇಮಕಾತಿಗಳು ನಡೆದಿವೆ. ನ್ಯೂಝಿಲ್ಯಾಂಡ್ನ ಮಾಜಿ ಆಟಗಾರ ಮಿಚೆಲ್ ಮೆಕ್ಲೆನಾಗನ್ ಬೌಲಿಂಗ್ ಕೋಚ್ ಆಗಿ, ಟಿ. ದಿಲೀಪ್ ಫೀಲ್ಡಿಂಗ್ ಕೋಚ್ ಆಗಿ ಮತ್ತು ಧವಲ್ ಕುಲಕರ್ಣಿ ಡೆವಲಪ್ಮೆಂಟ್ ಬೌಲಿಂಗ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.






