ಟೆನಿಸ್ ಹಾಲ್ ಆಫ್ ಫೇಮ್ಗೆ ರೋಜರ್ ಫೆಡರರ್ ಸೇರ್ಪಡೆ: ಭಾಷಣದ ವೇಳೆ ಭಾವುಕರಾದ ದಿಗ್ಗಜ

ರೋಜರ್ ಫೆಡರರ್ | Photo Credit : NDTV
ನ್ಯೂಪೋರ್ಟ್: ಅಮೆರಿಕದ ರೋಡ್ ಐಲ್ಯಾಂಡ್ನ ನ್ಯೂಪೋರ್ಟ್ನಲ್ಲಿರುವ ಅಂತರರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್ಗೆ ಶನಿವಾರ ಟೆನಿಸ್ ದಿಗ್ಗಜ ರೋಜರ್ ಫೆಡರರ್ರನ್ನು ಸೇರ್ಪಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸ್ವೀಕಾರ ಭಾಷಣ ಮಾಡಿದ 20 ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಫೆಡರರ್, ತನ್ನ ಭವ್ಯ ವೃತ್ತಿಜೀವನವನ್ನು ಸ್ಮರಿಸುತ್ತಾ ಕಣ್ಣೀರು ಹಾಕಿದರು.
‘‘ಇದು ನನ್ನ ಜೀವನದ ಅತ್ಯಂತ ಶ್ರೇಷ್ಠ ಗೌರವಗಳಲ್ಲಿ ಒಂದಾಗಿದೆ’’ ಎಂದು ಹೇಳಿದ ಫೆಡರರ್, ‘‘ಅವರು ಇದನ್ನು ‘ಹಾಲ್ ಆಫ್ ಫೇಮ್’ (ಪ್ರಸಿದ್ಧಿಯ ಕೋಣೆ) ಎಂದು ಕರೆಯುತ್ತಾರೆ, ಆದರೆ ಪ್ರಸಿದ್ಧಿಯನ್ನು ಗಳಿಸುವುದು ಎಂದಿಗೂ ನನ್ನ ಗುರಿಯಾಗಿರಲಿಲ್ಲ’’ ಎಂದರು.
‘‘ನಾನು ಇಷ್ಟಪಡುವ ಕೆಲಸವನ್ನು... ಅದನ್ನು ನನ್ನಷ್ಟೇ ಪ್ರೀತಿಸುವ ಜನರೊಂದಿಗೆ ಮಾಡುತ್ತಾ ನನ್ನ ಜೀವನವನ್ನು ಕಳೆಯುವುದೇ ನನ್ನ ಗುರಿಯಾಗಿತ್ತು’’ ಎಂದರು.
ಸ್ವಿಟ್ಸರ್ಲ್ಯಾಂಡ್ ಆಟಗಾರ ಪುರುಷರ ವಿಭಾಗದಲ್ಲಿ ದಾಖಲೆಯ ಎಂಟು ವಿಂಬಲ್ಡನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ವಿಶ್ವದ ನಂಬರ್ ವನ್ ಆಟಗಾರನಾಗಿ 310 ವಾರಗಳನ್ನು ಕಳೆದಿದ್ದಾರೆ. ಅವರು ಆರು ಆಸ್ಟ್ರೇಲಿಯನ್ ಓಪನ್, ಐದು ಯುಎಸ್ ಓಪನ್ ಮತ್ತು ಒಂದು ಫ್ರೆಂಚ್ ಓಪನ್ ಪ್ರಶಸ್ತಿಗಳನ್ನೂ ಗೆದ್ದುಕೊಂಡಿದ್ದಾರೆ. ಅವರು 2022 ರಲ್ಲಿ ಒಟ್ಟು 103 ಎಟಿಪಿ ಟೂರ್ ಪ್ರಶಸ್ತಿಗಳೊಂದಿಗೆ ನಿವೃತ್ತರಾದರು.
‘‘ಟೆನಿಸ್ ನನಗೆ ಎಲ್ಲವೂ ಆಗಿತ್ತು. ಕೇವಲ ಆಡುವುದು ಅಥವಾ ಗೆಲ್ಲುವುದು ಮಾತ್ರವಲ್ಲ, ಹೊಸದನ್ನು ಸೃಷ್ಟಿಸುವುದು ನನ್ನ ಆಸೆಯಾಗಿತ್ತು’’ ಎಂದು 45 ವರ್ಷದ ಫೆಡರರ್ ಹೇಳಿದರು.
‘‘ನಾವೆಲ್ಲರೂ ಒಂದು ದಿನ ಅಂಗಳದಿಂದ ನಿರ್ಗಮಿಸಲೇಬೇಕು, ಆದರೆ ಕ್ರೀಡೆ ಮುಂದುವರಿಯುತ್ತಲೇ ಇರುತ್ತದೆ’’ ಎಂದು ಫೆಡರರ್ ಹೇಳಿದರು.
ಫೆಡರರ್ ಜೊತೆಗೆ, ಟೆಲಿವಿಶನ್ ಕ್ಷೇತ್ರದ ಮೇರಿ ಕ್ಯಾರಿಲೊ ಕೂಡ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಂಡರು.






