ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ಕ್ವಾರ್ಟರ್ ಫೈನಲ್ ಗೆ

ಬೋಪಣ್ಣ | Photo : twitter
ಲಂಡನ್: ಭಾರತದ ಸೂಪರ್ ಸ್ಟಾರ್ ಎಂದು ವಿಂಬಲ್ಡನ್ನಿಂದ ಕನ್ನಡದಲ್ಲೇ ಪ್ರಶಂಸೆಗೆ ಒಳಗಾಗಿರುವ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಆಡುತ್ತಿರುವ ಹಿರಿಯ ವಯಸ್ಸಿನ ಆಟಗಾರ ರೋಹನ್ ಬೋಪಣ್ಣ ತನ್ನ ಆಸ್ಟ್ರೇಲಿಯದ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಕ್ವಾರ್ಟರ್ಫೈನಲ್ ತಲುಪಿದ್ದಾರೆ.
ಬೆಂಗಳೂರಿನ 43ರ ಹರೆಯದ ಆರಡಿ ಎತ್ತರದ ಬೋಪಣ್ಣ ಹಾಗೂ ಎಬ್ಡೆನ್ ಎರಡು ಗಂಟೆ ಹಾಗೂ 19 ನಿಮಿಷಗಳ ಕಾಲ ಮಂಗಳವಾರ ನಡೆದ ಮಳೆಬಾಧಿತ 3ನೇ ಸುತ್ತಿನ ಪುರುಷರ ಡಬಲ್ಸ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ನ ಡೇವಿಡ್ ಪೆಲ್ ಹಾಗೂ ಅಮೆರಿಕದ ರೀಸ್ ಸ್ಟಾಲ್ಡರ್ ರನ್ನು 7-5, 4-6, 7-6(10-5) ಸೆಟ್ ಗಳ ಅಂತರದಿಂದ ಮಣಿಸಿದರು.
ಐದು ವರ್ಷಗಳ ಹಿಂದೆ ಮಂಡಿನೋವು ಕಾಣಿಸಿಕೊಂಡಾಗ ಬೋಪಣ್ಣರ ವೃತ್ತಿಬದುಕು ಅಪಾಯದಲ್ಲಿತ್ತು. ಆ ಸಮಸ್ಯೆಯಿಂದ ಪಾರಾದ ಬೋಪಣ್ಣ ಮಾರ್ಚ್ ನಲ್ಲಿ ಇಂಡಿಯನ್ ವೆಲ್ಸ್ ನಲ್ಲಿ ಮಾಸ್ಟರ್ಸ್ 1000 ಸ್ಪರ್ಧೆ ಜಯಿಸಿದ ಹಿರಿಯ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.
13ನೇ ಬಾರಿ ವಿಂಬಲ್ಡನ್ ನಲ್ಲಿ ಆಡಿದ ಬೋಪಣ್ಣ 2013 ಹಾಗೂ 2015ರಲ್ಲಿ ಸೆಮಿ ಫೈನಲ್ ತಲುಪಿದ್ದರು. ಸರಿಯಾಗಿ 10 ವರ್ಷಗಳ ಹಿಂದೆ ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ಸೆಮಿ ಫೈನಲ್ ಗೆ ತಲುಪಿ ಶ್ರೇಷ್ಠ ಪ್ರದರ್ಶನ ನೀಡಿದ್ದು, ವಿಶ್ವ ರ್ಯಾಂಕಿಂಗ್ ನಲ್ಲಿ ಜೀವನಶ್ರೇಷ್ಠ 3ನೇ ರ್ಯಾಂಕ್ ತಲುಪಿದ್ದರು.
ಇದೇ ವೇಳೆ ಜೂನಿಯರ್ ಬಾಯ್ಸ್ ಸ್ಪರ್ಧೆಯಲ್ಲಿ ಭಾರತದ ಮಾನಸ್ ಧಾಮ್ನೆ ಬ್ರಿಟನ್ ನ ಹೆನ್ರಿ ಸೀರ್ಲೆ ವಿರುದ್ಧ 1-6, 4-6 ಸೆಟ್ ಗಳ ಅಂತರದಿಂದ ಸೋತಿದ್ದಾರೆ.







