ರೋಹಿತ್ ದಾಖಲೆ ಮುರಿದು ಇತಿಹಾಸ ನಿರ್ಮಿಸಿದ ಪಂತ್

ರಿಷಭ್ ಪಂತ್ | PC :ICC
ಮ್ಯಾಂಚೆಸ್ಟರ್, ಜು.24: ಭಾರತ-ಇಂಗ್ಲೆಂಡ್ ನಡುವೆ ಓಲ್ಡ್ ಟ್ರಾಫರ್ಡ್ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ ಮಾಜಿ ನಾಯಕ ರೋಹಿತ್ ಶರ್ಮಾರ ದಾಖಲೆಯನ್ನು ಮುರಿದು ಇತಿಹಾಸ ನಿರ್ಮಿಸಿದರು.
ಪಂತ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ (ಡಬ್ಲ್ಯುಟಿಸಿ) ಗರಿಷ್ಠ ರನ್ ಗಳಿಸಿದ ರೋಹಿತ್ ಶರ್ಮಾರ ದಾಖಲೆ(2,716 ರನ್)ಮುರಿದರು. ಪಂತ್ ತನ್ನ 38ನೇ ಡಬ್ಲ್ಯುಟಿಸಿ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದರು.
ತನ್ನ ಕಾಲಿಗೆ ಗಾಯವಾಗಿದ್ದರೂ 2ನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರಿಸಿದ ಪಂತ್ಗೆ ರೋಹಿತ್ ಅವರ ದಾಖಲೆ ಮುರಿಯಲು 40 ರನ್ ಅಗತ್ಯವಿತ್ತು. ಭಾರತದ ಮೊದಲ ಇನಿಂಗ್ಸ್ನಲ್ಲಿ ಪಂತ್ ಈ ದಾಖಲೆಯನ್ನು ಮುರಿದಿದ್ದಾರೆ. ಪ್ರಸಕ್ತ ಡಬ್ಲ್ಯುಟಿಸಿ ವೃತ್ತಿಜೀವನದಲ್ಲಿ ಪಂತ್ ಅವರು 38 ಪಂದ್ಯಗಳಲ್ಲಿ 43.80ರ ಸರಾಸರಿಯಲ್ಲಿ 6 ಶತಕ ಹಾಗೂ 15 ಅರ್ಧಶತಕಗಳ ಸಹಿತ 2,717 ರನ್ ಗಳಿಸಿದ್ದಾರೆ.
ಡಬ್ಲ್ಯುಟಿಸಿ ಇತಿಹಾಸದಲ್ಲಿ ಭಾರತದ ಗರಿಷ್ಠ ರನ್ ಸ್ಕೋರರ್ಗಳ ಪಟ್ಟಿಯಲ್ಲಿ ಪಂತ್ ಮೊದಲನೇ ಸ್ಥಾನಕ್ಕೇರಿದ್ದಾರೆ. ರೋಹಿತ್ ಶರ್ಮಾ(40 ಪಂದ್ಯ, 2,716 ರನ್)2ನೇ ಸ್ಥಾನಕ್ಕೆ ಕುಸಿದಿದ್ದಾರೆ. ವಿರಾಟ್ ಕೊಹ್ಲಿ(46 ಪಂದ್ಯ, 2,617), ಶುಭಮನ್ ಗಿಲ್(36 ಪಂದ್ಯ, 2,512 ರನ್), ರವೀಂದ್ರ ಜಡೇಜ(43 ಪಂದ್ಯ, 2,232 ರನ್), ಯಶಸ್ವಿ ಜೈಸ್ವಾಲ್(23 ಪಂದ್ಯ, 2,089 ರನ್) ಹಾಗೂ ಕೆ.ಎಲ್. ರಾಹುಲ್(28 ಪಂದ್ಯ, 1,773 ರನ್) ಟಾಪ್-10ರಲ್ಲಿದ್ದಾರೆ.





