2016ರ ನಂತರ ಸತತ 2 ಐಪಿಎಲ್ ಅರ್ಧಶತಕ ಗಳಿಸಿದ ರೋʼಹಿಟ್ʼ

ರೋಹಿತ್ ಶರ್ಮಾ | PC : BCCI
ಹೊಸದಿಲ್ಲಿ: ಮತ್ತೊಮ್ಮೆ ಆಕರ್ಷಕ ಅರ್ಧಶತಕ(70 ರನ್, 46 ಎಸೆತ)ಗಳಿಸಿದ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವು ಬುಧವಾರ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿ ಸತತ 4ನೇ ಪಂದ್ಯವನ್ನು ಜಯಿಸಲು ನೆರವಾದರು. ಮಾಜಿ ನಾಯಕ ರೋಹಿತ್ ತನ್ನ ಹಿಂದಿನ ಲಯಕ್ಕೆ ಮರಳಿ ಮುಂಬೈ ತಂಡವು 9 ಪಂದ್ಯಗಳಲ್ಲಿ 10 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಲು ನೆರವಾಗಿದ್ದಾರೆ.
37ರ ಹರೆಯದ ಆರಂಭಿಕ ಆಟಗಾರ ರೋಹಿತ್ ಅವರ ಪ್ರದರ್ಶನದಲ್ಲಿ ಮಹತ್ವದ ಸುಧಾರಣೆಯಾಗಿದೆ. ಮೊದಲ 6 ಪಂದ್ಯಗಳಲ್ಲಿ 13.7ರ ಸರಾಸರಿಯಲ್ಲಿ ಕೇವಲ 82 ರನ್ ಗಳಿಸಿದ್ದ ರೋಹಿತ್ ಅವರು ಸಿಎಸ್ಕೆ ವಿರುದ್ಧ ಔಟಾಗದೆ 76 ಹಾಗೂ ಎಸ್ಆರ್ಎಚ್ ವಿರುದ್ಧ 70 ರನ್ ಗಳಿಸಿ ಪುಟಿದೆದ್ದಿದ್ದಾರೆ.
ರೋಹಿತ್ 2016ರ ನಂತರ ಇದೇ ಮೊದಲ ಬಾರಿ ಐಪಿಎಲ್ ನಲ್ಲಿ ಸತತ 2 ಅರ್ಧ ಶತಕ ಗಳಿಸಿದ್ದಾರೆ. ಈ ಹಿಂದೆ ಅವರು ಕೆಕೆಆರ್ ಹಾಗೂ ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ವಿರುದ್ಧ ಈ ಸಾಧನೆ ಮಾಡಿದ್ದರು.
ಇದೇ ವೇಳೆ ಮುಂಬೈ ಇಂಡಿಯನ್ಸ್ ಪರ ಗರಿಷ್ಠ ಸಿಕ್ಸರ್ಗಳನ್ನು ಸಿಡಿಸಿರುವ ರೋಹಿತ್ ಅವರು ಕಿರೋನ್ ಪೊಲಾರ್ಡ್ ಅವರ ದಾಖಲೆಯನ್ನು ಮುರಿದಿದ್ದಾರೆ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರೋಹಿತ್ 8 ಪಂದ್ಯಗಳಿಂದ 32.57ರ ಸರಾಸರಿಯಲ್ಲಿ 154.05ರ ಸ್ಟ್ರೈಕ್ರೇಟ್ನಲ್ಲಿ ಒಟ್ಟು 228 ರನ್ ಗಳಿಸಿದ್ದಾರೆ.







