ರೋಹಿತ್, ಕೊಹ್ಲಿಯ ಸ್ಥಾನವನ್ನು ಅವರ ನಿರ್ವಹಣೆ ನಿರ್ಧರಿಸುತ್ತದೆ: ಗಂಭೀರ್

ಗೌತಮ್ ಗಂಭೀರ್ , ರೋಹಿತ್ ಶರ್ಮಾ | PTI
ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ನಿರ್ವಹಣೆಯು ತಂಡದಲ್ಲಿ ಅವರ ಸ್ಥಾನವನ್ನು ನಿರ್ಧರಿಸುತ್ತದೆಯೇ ಹೊರತು ಅವರ ಹೆಸರಲ್ಲ ಎಂದು ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.
ಉತ್ತಮ ನಿರ್ವಹಣೆ ನೀಡುವವರೆಗೆ ಅವರು ತಂಡದಲ್ಲಿರಬೇಕು. ನಿರ್ವಹಣೆ ಚೆನ್ನಾಗಿದ್ದರೆ ಅವರು ತಂಡಕ್ಕೆ ಆಯ್ಕೆಯಾಗುತ್ತಾರೆ. ಆಟಗಾರನೊಬ್ಬ ಉತ್ತಮ ನಿರ್ವಹಣೆ ನೀಡುತ್ತಿರುವವರೆಗೆ ಆಡುವುದನ್ನು ನಿಲ್ಲಿಸುವಂತೆ ಹೇಳಲು ಯಾವುದೇ ಕೋಚ್, ಆಯ್ಕೆಗಾರ ಅಥವಾ ಬಿಸಿಸಿಐಗೂ ಹೇಳಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಗಂಭೀರ್ ನೀಡಿದ್ದಾರೆ.
ಎಬಿಪಿಯ ‘ಇಂಡಿಯಾ ಎಟ್ 2047’ ಶೃಂಗ ಸಮ್ಮೇಳನದಲ್ಲಿ ಮಾತನಾಡಿದ ಗಂಭೀರ್, ರೋಹಿತ್ ಶರ್ಮಾ ಮತ್ತು ಕೊಹ್ಲಿಗೆ ವಿದಾಯ ಕೋರಲು ಸಿದ್ಧತೆಗಳನ್ನು ನಡೆಸಲಾಗಿದೆ ಎಂಬ ಊಹಾಪೋಹಗಳನ್ನೂ ತಳ್ಳಿಹಾಕಿದರು.
ಅತ್ಯುನ್ನತ ಮಟ್ಟದಲ್ಲಿ ಭಾವನಾತ್ಮಕ ವಿದಾಯಗಳಿಗೆ ಸ್ಥಳವಿಲ್ಲ ಎಂದರು. ‘‘ಯಾವುದೇ ಕ್ರೀಡಾಪಟು ವಿದಾಯಕ್ಕಾಗಿ ಆಡುವುದಿಲ್ಲ. ದೇಶದ ಪ್ರೀತಿಯೇ ಅತಿ ದೊಡ್ಡ ವಿದಾಯ ಮತ್ತು ಟ್ರೋಫಿ. ಅದುವೇ ಮುಖ್ಯ’’ ಎಂದರು.
ನನ್ನ ಪಾತ್ರ ನನಗೆ ಬೇಕಾದವರನ್ನು ಆಯ್ಕೆ ಮಾಡುವುದಲ್ಲ, ಪ್ರತಿಭೆಯನ್ನು ಎತ್ತಿಹಿಡಿಯುವುದು.ತಂಡವನ್ನು ಆಯ್ಕೆ ಮಾಡುವುದು ಕೋಚ್ ನ ಕೆಲಸವಲ್ಲ. ಅದು ಆಯ್ಕೆಗಾರರಿಗೆ ಬಿಟ್ಟ ವಿಚಾರ. ಯಾರೇ ಆಯ್ಕೆಯಾದರೂ ಅವರು ಭಾರತಕ್ಕಾಗಿ ಉತ್ತಮ ಪ್ರದರ್ಶನ ನೀಡುವಂತೆ ಸಿದ್ಧಪಡಿಸುವುದು ನನ್ನ ಜವಾಬ್ದಾರಿ’’ ಎಂದು ಅವರು ಹೇಳಿದರು.







