ನಿವೃತ್ತಿಯ ಹೊರತಾಗಿಯೂ ರೋಹಿತ್, ಕೊಹ್ಲಿಯ 'ಎ' ಪ್ಲಸ್ ಗುತ್ತಿಗೆ ಅಬಾಧಿತ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ | PTI
ಮುಂಬೈ : ಟೆಸ್ಟ್ ಮತ್ತು ಅಂತರ್ರಾಷ್ಟ್ರೀಯ ಟಿ20 ಪಂದ್ಯಗಳಿಂದ ನಿವೃತ್ತಿ ಹೊಂದಿರುವ ಹೊರತಾಗಿಯೂ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಎ ಪ್ಲಸ್ ಗುತ್ತಿಗೆಗಳನ್ನು ಉಳಿಸಿಕೊಂಡಿರುವುದನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ದೇವಜಿತ್ ಸೈಕಿಯ ಬುಧವಾರ ಖಚಿತಪಡಿಸಿದ್ದಾರೆ.
2024-25ರ ಸಾಲಿನ ಗುತ್ತಿಗೆಗಳಲ್ಲಿ, ಅತ್ಯುನ್ನತ ಎ ಪ್ಲಸ್ ದರ್ಜೆಯಲ್ಲಿ ರೋಹಿತ್, ಕೊಹ್ಲಿ, ಜಸ್ಪ್ರಿತ್ ಬುಮ್ರಾ ಮತ್ತು ರವೀಂದ್ರ ಜಡೇಜರನ್ನು ಉಳಿಸಿಕೊಳ್ಳಲಾಗಿದೆ.
‘‘ಅಂತರ್ರಾಷ್ಟ್ರೀಯ ಟಿ20 ಮತ್ತು ಟೆಸ್ಟ್ಗಳಿಂದ ನಿವೃತ್ತಿ ಹೊಂದಿದ ಹೊರತಾಗಿಯೂ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರ ಎ ಪ್ಲಸ್ ದರ್ಜೆಯ ಗುತ್ತಿಗೆಗಳು ಮುಂದುವರಿಯಲಿವೆ. ಅವರು ಈಗಲೂ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿದ್ದಾರೆ. ಅವರು ಎ ಪ್ಲಸ್ ದರ್ಜೆಯ ಗುತ್ತಿಗೆಯ ಎಲ್ಲಾ ಸೌಲಭ್ಯಗಳನ್ನು ಪಡೆಯಲಿದ್ದಾರೆ’’ ಎಂದು ಎಎನ್ಐ ಜೊತೆಗೆ ಮಾತನಾಡಿದ ಸೈಕಿಯ ಹೇಳಿದರು.
ವಿರಾಟ್ ಕೊಹ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸಕ್ಕೆ ಮುನ್ನ, ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಕೋರಿದ್ದಾರೆ. ಅವರು 14 ವರ್ಷಗಳ ಕ್ರೀಡಾ ಜೀವನದ ಅವಧಿಯಲ್ಲಿ 123 ಪಂದ್ಯಗಳಿಂದ 46.85ರ ಸರಾಸರಿಯಲ್ಲಿ 9,230 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ 30 ಶತಕಗಳು ಮತ್ತು 31 ಅರ್ಧ ಶತಕಗಳಿವೆ. ಅವರ ಗರಿಷ್ಠ ಸ್ಕೋರ್ ಔಟಾಗದೆ 254.
ರೋಹಿತ್ ಶರ್ಮಾ ಮೇ 7ರಂದು ಟೆಸ್ಟ್ ಕ್ರಿಕೆಟ್ಗೆ ವಿದಾಯ ಕೋರಿದ್ದಾರೆ. ಅವರು 11 ವರ್ಷಗಳ ತನ್ನ ಕ್ರೀಡಾ ಜೀವನದ ಅವಧಿಯಲ್ಲಿ 67 ಪಂದ್ಯಗಳಿಂದ 40.57ರ ಸರಾಸರಿಯಲ್ಲಿ 4,301 ರನ್ಗಳನ್ನು ಸಂಗ್ರಹಿಸಿದ್ದಾರೆ. ಅದರಲ್ಲಿ 12 ಶತಕಗಳು ಮತ್ತು 18 ಅರ್ಧ ಶತಕಗಳಿವೆ. ಅವರು 2019ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ತನ್ನ ಗರಿಷ್ಠ 212 ರನ್ಗಳನ್ನು ಬಾರಿಸಿದ್ದಾರೆ.