ರೋಹಿತ್-ಕೊಹ್ಲಿಯನ್ನು ತಂಡದಿಂದ ಹೊರದೂಡಲಾಯಿತು: ಗೌತಮ್ ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗ ಆಕ್ರೋಶ

ರೋಹಿತ್ ಶರ್ಮ , ವಿರಾಟ್ | Photo Credit : PTI
ಹೊಸದಿಲ್ಲಿ: ಹಾಲಿ ಭಾರತೀಯ ತಂಡದ ಆಡಳಿತ ಮಂಡಳಿಯ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿರುವ ಮಾಜಿ ಭಾರತೀಯ ಕ್ರಿಕೆಟಿಗ ಮನೋಜ್ ತಿವಾರಿ, ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿಯ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನವನ್ನು ವ್ಯವಸ್ಥಿತವಾಗಿ ಅಂತ್ಯಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಹಿರಿಯ ಆಟಗಾರರಾದ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿಗೆ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಮುಂದುವರಿಯುವ ಬಯಕೆಯಿದ್ದರೂ, ಪರಿವರ್ತನೆಯ ಮಾತುಗಳನ್ನು ಪ್ರಾರಂಭಿಸಲಾಯಿತು ಎಂದೂ ಅವರು ದೂರಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕೆ ಕೆಲವೇ ವಾರಗಳಿರುವಾಗ, ಮೇ 2025ರಲ್ಲಿ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರು. ಹೊಸ ತಲೆಮಾರಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಸಂದೇಶ ಅನಗತ್ಯವಾಗಿತ್ತು. ಅಂತಿಮವಾಗಿ ಹಿರಿಯ ಆಟಗಾರರನ್ನು ತಂಡದಿಂದ ಹೊರದೂಡಲಾಯಿತು ಎಂದೂ ಅವರು ಆರೋಪಿಸಿದ್ದಾರೆ.
“ಈ ಇಡೀ ಪರಿವರ್ತನೆ ಹಂತದ ಮಾತುಕತೆಗಳನ್ನು ನಾನು ಒಪ್ಪುವುದಿಲ್ಲ. ಭಾರತ ತಂಡಕ್ಕೆ ಪರಿವರ್ತನೆಯ ಅಗತ್ಯವಿಲ್ಲ. ಬದಲಿಗೆ, ನ್ಯೂಝಿಲೆಂಡ್ ಮತ್ತು ಝಿಂಬಾಬ್ವೆ ತಂಡಕ್ಕೆ ಪರಿವರ್ತನೆಯ ಅಗತ್ಯವಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ. “ನಮ್ಮ ದೇಶೀಯ ಕ್ರಿಕೆಟ್ ಪ್ರತಿಭಾವಂತ ಆಟಗಾರರಿಂದ ತುಂಬಿದ್ದು, ಅವರೆಲ್ಲ ಅವಕಾಶಕ್ಕಾಗಿ ಕಾಯುತ್ತಿದ್ದಾರೆ” ಎಂದೂ ಅವರು ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಪ್ರಥಮ ಟೆಸ್ಟ್ ನಲ್ಲಿ ಭಾರತ ತಂಡ ಪರಾಭವಗೊಂಡ ಭಾರತ ತಂಡದ ಕುರಿತು ಮುಖ್ಯ ಕೋಚ್ ಗೌತಮ್ ಗಂಭೀರ್ ನೀಡಿರುವ ಹೇಳಿಕೆಯನ್ನೂ ಟೀಕಿಸಿರುವ ಮನೋಜ್ ತಿವಾರಿ, ತರಬೇತುದಾರರು ಬೊಟ್ಟು ಮಾಡುವ ಬದಲು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಬಾರದು ಎಂದು ತಾಕೀತು ಮಾಡಿದ್ದಾರೆ.







