ಚಾಂಪಿಯನ್ಸ್ ಟ್ರೋಫಿ ಬಳಿಕ ರೋಹಿತ್ ಶರ್ಮಾ ವಿದಾಯ ಹೇಳುವರೇ?
ತಂಡದ ನಾಯಕನಿಗೆ ಬಿಸಿಸಿಐ ಸೂಚನೆ?

ರೋಹಿತ್ ಶರ್ಮಾ | PTI
ಮುಂಬೈ: ಭಾರತದ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ತಂಡಗಳ ನಾಯಕ ರೋಹಿತ್ ಶರ್ಮಾ, ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಬಳಿಕ ಚುಟುಕು ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಪಾಕಿಸ್ತಾನ ಮತ್ತು ದುಬೈಗಳಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಳಿಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ಗೂ ವಿದಾಯ ಹೇಳುವ ಸಾಧ್ಯತೆಯಿದೆ.
ತುಂಬಾ ಸಮಯದಿಂದ ರೋಹಿತ್ ಫಾರ್ಮ್ನಲ್ಲಿಲ್ಲ. ಒಂದು ಹಂತದಲ್ಲಿ ಅವರು ಟೆಸ್ಟ್ ಕ್ರಿಕೆಟ್ಗೂ ವಿದಾಯ ಹೇಳುವ ಸಮೀಪಕ್ಕೆ ಬಂದಿದ್ದರು ಎನ್ನಲಾಗಿದೆ. ಆದರೆ ಕೊನೆಯ ಕ್ಷಣದಲ್ಲಿ ಅದರಿಂದ ಹಿಂದೆ ಸರಿದಿದ್ದಾರೆ.
ಈ ನಡುವೆ, ಚಾಂಪಿಯನ್ಸ್ ಟ್ರೋಫಿ ಬಳಿಕ, ನಿಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಸ್ಪಷ್ಟನೆ ನೀಡಬೇಕು ಎಂಬುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ರೋಹಿತ್ಗೆ ಸೂಚನೆ ನೀಡಿದೆ ಎನ್ನಲಾಗಿದೆ. ಮಂಡಳಿಯು 2027ರ ಏಕದಿನ ವಿಶ್ವಕಪ್ಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಇದಕ್ಕೆ ರೋಹಿತ್ರ ಮುಂದಿನ ನಡೆಯ ಕುರಿತ ಸ್ಪಷ್ಟನೆಯ ಅಗತ್ಯವಿದೆ.
ಏಕದಿನ ಮತ್ತು ಟೆಸ್ಟ್ ಎರಡೂ ತಂಡಗಳಲ್ಲಿ ಪರಿವರ್ತನೆ ಆರಂಭವಾಗಬೇಕೆಂದು ಬಿಸಿಸಿಐ ಬಯಸುತ್ತಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ದ ವರದಿಯೊಂದು ತಿಳಿಸಿದೆ. ಕ್ರಿಕೆಟ್ನ ಎರಡೂ ಮಾದರಿಗಳಲ್ಲಿ ಸ್ಥಿರ ನಾಯಕತ್ವವನ್ನು ಮಂಡಳಿಯು ಎದುರು ನೋಡುತ್ತಿದೆ. ಹಾಗಾಗಿ, ತನ್ನ ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡುವಂತೆ ಮಂಡಳಿಯು ರೋಹಿತ್ ಶರ್ಮಾರಿಗೆ ಸೂಚಿಸಿದೆ ಎನ್ನಲಾಗಿದೆ.
ಅದೇ ವೇಳೆ, ವಿರಾಟ್ ಕೊಹ್ಲಿಯ ವಿಷಯದಲ್ಲಿ ಇನ್ನೂ ಸ್ವಲ್ಪ ಸಮಯ ಕಾಯಲು ಬಿಸಿಸಿಐ ಬಯಸಿದೆ ಎನ್ನಲಾಗಿದೆ.
‘‘ಆಯ್ಕೆಗಾರರು ಮತ್ತು ಬಿಸಿಸಿಐಯ ಇತರರು, ಕಳೆದ ಆಯ್ಕೆ ಸಭೆಯ ಆಸುಪಾಸಿನಲ್ಲಿ ಈ ವಿಷಯದ ಬಗ್ಗೆ ರೋಹಿತ್ ಶರ್ಮ ಜೊತೆಗೆ ಮಾತುಕತೆ ನಡೆಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಬಳಿಕ, ನಿಮ್ಮ ಭವಿಷ್ಯವನ್ನು ಯಾವ ರೀತಿಯಲ್ಲಿ ರೂಪಿಸಿಕೊಳ್ಳಲು ಬಯಸಿದ್ದೀರಿ ಎನ್ನುವುದನ್ನು ನೀವು ನಿರ್ಧರಿಸಬೇಕು ಎಂಬುದಾಗಿ ರೋಹಿತ್ಗೆ ತಿಳಿಸಲಾಗಿದೆ. ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಚಕ್ರ ಮತ್ತು ಏಕದಿನ ವಿಶ್ವಕಪ್ಗಾಗಿ ತಂಡಾಡಳಿತವು ಕೆಲವೊಂದು ಯೋಜನೆಗಳನ್ನು ಹೊಂದಿದೆ. ತಂಡದ ಸುಲಲಿತ ಪರಿವರ್ತನೆಯ ವಿಷಯದಲ್ಲಿ ಒಮ್ಮತ ಸಾಧಿಸುವ ನಿಟ್ಟಿನಲ್ಲಿ ಬಿಸಿಸಿಐ ಪ್ರಯತ್ನಿಸುತ್ತಿದೆ’’ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.