ಭಾರತದ ಪರ ಏಕದಿನದಲ್ಲಿ ಗರಿಷ್ಠ ಸ್ಕೋರ್: ರೋಹಿತ್ ಶರ್ಮಾ ಈಗ ನಂ.3

ರೋಹಿತ್ ಶರ್ಮಾ | Photo Credit : PTI
ಅಡಿಲೇಡ್ ಭಾರತೀಯ ಕ್ರಿಕೆಟ್ ತಾರೆ ರೋಹಿತ್ ಶರ್ಮಾ ಆಸ್ಟ್ರೇಲಿಯದ ವಿರುದ್ಧ ಗುರುವಾರ ನಡೆದ 2ನೇ ಏಕದಿನ ಪಂದ್ಯದ ವೇಳೆ ಇತಿಹಾಸ ನಿರ್ಮಿಸಿದರು. ಸೌರವ್ ಗಂಗುಲಿ(11,221 ರನ್)ದಾಖಲೆಯನ್ನು ಮುರಿದ ರೋಹಿತ್ ಏಕದಿನ ಕ್ರಿಕೆಟ್ನಲ್ಲಿ ಭಾರತದ ಮೂರನೇ ಗರಿಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.
21ನೇ ಓವರ್ನಲ್ಲಿ ಆ್ಯಡಮ್ ಝಂಪಾ ಬೌಲಿಂಗ್ನಲ್ಲಿ ಬೌಂಡರಿ ಸಿಡಿಸಿದ ರೋಹಿತ್ ಈ ಮೈಲಿಗಲ್ಲು ತಲುಪಿದ್ದಾರೆ.
ಮುಂಬೈ ಮೂಲದ ಬ್ಯಾಟರ್ ಭಾರತದ ಪರ ತನ್ನ 275ನೇ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದರು. 1992 ಹಾಗೂ 2007ರ ನಡುವೆ 308 ಪಂದ್ಯಗಳನ್ನು ಆಡಿದ್ದ ಗಂಗುಲಿ 297 ಇನಿಂಗ್ಸ್ಗಳಲ್ಲಿ 11,221 ರನ್ ಗಳಿಸಿದ್ದರು. ಇದೀಗ ಏಕದಿನ ಪಂದ್ಯದಲ್ಲಿ ಭಾರತದ ಪರ ಸಚಿನ್ ತೆಂಡುಲ್ಕರ್ (18,426 ರನ್)ಹಾಗೂ ವಿರಾಟ್ ಕೊಹ್ಲಿ(14,181 ರನ್)ಮಾತ್ರ ಗರಿಷ್ಠ ರನ್ ಕಲೆ ಹಾಕಿದ್ದಾರೆ.
ರೋಹಿತ್ ಅವರು ಗಂಗುಲಿ ಅವರ ಮತ್ತೊಂದು ದಾಖಲೆಯನ್ನು ಮುರಿದರು. ಏಕದಿನ ಕ್ರಿಕೆಟ್ನಲ್ಲಿ ಆರಂಭಿಕ ಆಟಗಾರನಾಗಿ ಗರಿಷ್ಠ ರನ್ ಗಳಿಸುವ ಮೂಲಕ ಗಂಗುಲಿ ಅವರ ದಾಖಲೆ(9,146 ರನ್)ಯನ್ನು ಮುರಿದಿದ್ದಾರೆ.
ಇದೇ ವೇಳೆ ರೋಹಿತ್ ಅವರು ಆಸ್ಟ್ರೇಲಿಯ ನೆಲದಲ್ಲಿ ಭಾರತ-ಆಸ್ಟ್ರೇಲಿಯ ನಡುವಿನ ಏಕದಿನ ಪಂದ್ಯಗಳಲ್ಲಿ 1,000 ರನ್ ಗಳಿಸಿದ ಮೊದಲ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು. 3ನೇ ಓವರ್ನಲ್ಲಿ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಬೌಂಡರಿ ಗಳಿಸುವ ಮೂಲಕ ರೋಹಿತ್ ಈ ಮೈಲಿಗಲ್ಲು ತಲುಪಿದರು. ರೋಹಿತ್ ಆಸ್ಟ್ರೇಲಿಯ ವಿರುದ್ಧ ಅದರದೇ ನೆಲದಲ್ಲಿ 21ನೇ ಏಕದಿನ ಪಂದ್ಯವನ್ನಾಡಿದರು.
ಆಸ್ಟ್ರೇಲಿಯದಲ್ಲಿ ನಡೆದಿದ್ದ ಭಾರತ-ಆಸ್ಟ್ರೇಲಿಯ ನಡುವಿನ ಏಕದಿನ ಪಂದ್ಯದಲ್ಲಿ ಗರಿಷ್ಠ ರನ್ ರನ್ ಗಳಿಸಿದವರ ಪಟ್ಟಿಯಲ್ಲಿ ರೋಹಿತ್ ಅಗ್ರ ಸ್ಥಾನದಲ್ಲಿದ್ದು, ಈ ಪ್ರತಿಷ್ಠಿತ ಗುಂಪಿನಲ್ಲಿ ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್, ಎಂ.ಎಸ್. ಧೋನಿ ಹಾಗೂ ಸ್ಟೀವ್ ಸ್ಮಿತ್ ಇದ್ದಾರೆ. ವೆಸ್ಟ್ಇಂಡೀಸ್ ಲೆಜೆಂಡ್ ವಿವಿ ರಿಚರ್ಡ್ಸ್ ಆಸ್ಟ್ರೇಲಿಯ ನೆಲದಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆ ಹೊಂದಿದ್ದಾರೆ.
ಬಲಗೈ ಬ್ಯಾಟರ್ ರೋಹಿತ್ 97 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ಗಳ ಸಹಾಯದಿಂದ 73 ರನ್ ಗಳಿಸಿ ಮಿಚೆಲ್ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿದರು. ಪಂದ್ಯದಲ್ಲಿ ತನ್ನ ಮೊದಲ ಸಿಕ್ಸರ್ ಸಿಡಿಸಿದ ರೋಹಿತ್ ಎಸ್ಇಎನ್ಎ ದೇಶಗಳ(ದ.ಆಫ್ರಿಕಾ, ಇಂಗ್ಲೆಂಡ್,ನ್ಯೂಝಿಲ್ಯಾಂಡ್, ಆಸ್ಟ್ರೇಲಿಯ)ವಿರುದ್ಧ 150ನೇ ಸಿಕ್ಸರ್ ಸಿಡಿಸಿದ ಏಶ್ಯದ ಮೊದಲ ಕ್ರಿಕೆಟಿಗನಾಗಿದ್ದಾರೆ.







