2023ರ ವಿಶ್ವಕಪ್ ಫೈನಲ್ ಸೋತಾಗಲೇ ನಿವೃತ್ತಿ ನಿರ್ಧಾರಕ್ಕೆ ಬಂದಿದ್ದೆ: ರೋಹಿತ್ ಶರ್ಮಾ

ರೋಹಿತ್ ಶರ್ಮಾ | Photo Credit : PTI
ಹೊಸದಿಲ್ಲಿ, ಡಿ.22: ಆಸ್ಟ್ರೇಲಿಯ ವಿರುದ್ಧ 2023ರಲ್ಲಿ ನಡೆದಿದ್ದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ಸೋತ ನಂತರ ನಿವೃತ್ತಿಯ ನಿರ್ಧಾರಕ್ಕೆ ಬಂದಿದ್ದೆ ಎಂದು ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ರೋಹಿತ್ ನಾಯಕತ್ವದಲ್ಲಿ ಭಾರತ ತಂಡವು 2023ರ ವಿಶ್ವಕಪ್ನಲ್ಲಿ ಸತತ 9 ಪಂದ್ಯಗಳಲ್ಲಿ ಜಯ ಸಾಧಿಸಿ ಫೈನಲ್ಗೆ ಲಗ್ಗೆ ಇಟ್ಟಿತ್ತು. ಆದರೆ, ಆಸ್ಟ್ರೇಲಿಯ ತಂಡವು ಟ್ರಾವಿಸ್ ಹೆಡ್ ಅವರ ಶತಕದ ಬಲದಿಂದ ಭಾರತ ತಂಡವನ್ನು ಆರು ವಿಕೆಟ್ಗಳಿಂದ ಮಣಿಸಿ ಭಾರತೀಯರ ವಿಶ್ವಕಪ್ ಕನಸನ್ನು ಭಗ್ನಗೊಳಿಸಿತ್ತು.
‘‘2023ರ ವಿಶ್ವಕಪ್ ಫೈನಲ್ ಪಂದ್ಯದ ನಂತರ ನಾನು ಸಂಪೂರ್ಣವಾಗಿ ದಿಗ್ಬ್ರಮೆಗೊಂಡಿದ್ದೆ. ಈ ಕ್ರೀಡೆ ನನ್ನಿಂದ ಎಲ್ಲವನ್ನೂ ಪಡೆದಿದ್ದರಿಂದ ನಾನು ಇನ್ನು ಮುಂದೆ ಈ ಕ್ರೀಡೆಯನ್ನು ಆಡಲು ಬಯಸುವುದಿಲ್ಲ ಎಂದು ನಿರ್ಧರಿಸಿದೆ. ನನ್ನಲ್ಲಿ ಏನೂ ಉಳಿದಿಲ್ಲ ಎಂಬ ಭಾವನೆ ಮೂಡಿತ್ತು’’ ಎಂದು ಗುರುಗ್ರಾಮದಲ್ಲಿ ನಡೆದಿದ್ದ ಮಾಸ್ಟರ್ಸ್ ಯೂನಿಯನ್ ಕಾರ್ಯಕ್ರಮದ ವೇಳೆ ರೋಹಿತ್ ಹೇಳಿದ್ದಾರೆ.
‘‘ಎಲ್ಲರೂ ತುಂಬಾ ನಿರಾಶೆಗೊಂಡರು. ಏನಾಯಿತು ಎಂದು ನಮಗೆ ನಂಬಲು ಸಾಧ್ಯವಾಗಲಿಲ್ಲ. ವೈಯಕ್ತಿಕವಾಗಿ ನನಗೆ ಅದು ತುಂಬಾ ಕಠಿಣ ಸಮಯವಾಗಿತ್ತು. ಏಕೆಂದರೆ ಆ ವಿಶ್ವಕಪ್ಗೆ ನಾನು ಎಲ್ಲ ಶ್ರಮ ಹಾಕಿದ್ದೆ. 2022ರಲ್ಲಿ ನಾನು ನಾಯಕತ್ವ ವಹಿಸಿಕೊಂಡಾಗಲೇ ತಯಾರಿ ಆರಂಭಿಸಿದ್ದೆ’’ಎಂದು ರೋಹಿತ್ ಹೇಳಿದ್ದಾರೆ.
ಅಹ್ಮದಾಬಾದ್ನಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ಸೋತ ಒಂದು ವರ್ಷದೊಳಗೆ ರೋಹಿತ್ ನಾಯಕತ್ವದಲ್ಲೇ ಭಾರತೀಯ ತಂಡವು ಅಮೆರಿಕದಲ್ಲಿ ಟಿ-20 ವಿಶ್ವಕಪ್ ಟ್ರೋಫಿ ಜಯಿಸಿತ್ತು. 2023ರ ನವೆಂಬರ್ನಲ್ಲಿ ಆಗಿದ್ದ ಸೋಲಿನ ನೋವಿನಿಂದ ಹೊರಬಂದಿತ್ತು.







