ಮುಂಬೈ ಇಂಡಿಯನ್ಸ್ ಗೆ ರೋಹಿತ್ ಶರ್ಮಾ ಮತ್ತೊಮ್ಮೆ ನಾಯಕ?
ತಿಲಕ್ ವರ್ಮಾ ಉಪ ನಾಯಕ?

Photo : BCCI
ಮುಂಬೈ, ಅ.31: ಮುಂಬರುವ 2027ರ IPL ಋತುವಿನಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿಯೂ, ಭಾರತದ ಉದಯೋನ್ಮುಖ ಟಿ-20 ಬ್ಯಾಟಿಂಗ್ ಸ್ಟಾರ್ ತಿಲಕ್ ವರ್ಮಾ ಉಪನಾಯಕರಾಗಿಯೂ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
39ರ ವಯಸ್ಸಿನ ರೋಹಿತ್ ಕೊನೆಯ ಬಾರಿ ಮುಂಬೈ ತಂಡವನ್ನು ನಾಯಕನಾಗಿ ಮುನ್ನಡೆಸುವ ಎಲ್ಲ ಸಾಧ್ಯತೆಯಿದೆ. ರೋಹಿತ್ ಅವರು 2013, 2015, 2017, 2019 ಹಾಗೂ 2020ರಲ್ಲಿ ಐದು ಬಾರಿ ಮುಂಬೈ ಇಂಡಿಯನ್ಸ್ ತಂಡ IPL ಪ್ರಶಸ್ತಿ ಗೆದ್ದಾಗ ನಾಯಕರಾಗಿದ್ದರು.
ರೋಹಿತ್ ಮತ್ತೊಮ್ಮೆ ನಾಯಕತ್ವ ವಹಿಸಿಕೊಂಡರೆ, ಇನ್ನು ಮುಂದೆ ಇಂಪ್ಯಾಕ್ಟ್ ಆಟಗಾರನಾಗಿ ಆಡುವುದಿಲ್ಲ. ಕಳೆದ ಎರಡು ವರ್ಷಗಳಿಂದ ರೋಹಿತ್ ಇಂಪ್ಯಾಕ್ಟ್ ಆಟಗಾರನಾಗಿ ಬ್ಯಾಟಿಂಗ್ ಗೆ ಇಳಿಯುತ್ತಿದ್ದರು.
2024ರಲ್ಲಿ ರೋಹಿತ್ ಬದಲಿಗೆ ನಾಯಕರಾಗಿ ನೇಮಕಗೊಂಡಿದ್ದ ಹಾರ್ದಿಕ್ ಪಾಂಡ್ಯ ಟ್ರೇಡ್ ಮೂಲಕ ಮತ್ತೊಂದು ಫ್ರಾಂಚೈಸಿಯ ಪಾಲಾಗಿದ್ದಾರೆ.
ನೂತನವಾಗಿ ನೇಮಕಗೊಂಡಿರುವ ಪ್ರಧಾನ ಕೋಚ್ ಕಿರೋನ್ ಪೊಲಾರ್ಡ್ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ಶುಕ್ರವಾರ ತನ್ನ ಕೋಚಿಂಗ್ ಸಿಬ್ಬಂದಿಯಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ಭಾರತದ ಮಾಜಿ ಬ್ಯಾಟರ್ ರಾಬಿನ್ ಉತ್ತಪ್ಪ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದರೆ, ಭಾರತದ ಮಾಜಿ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಫೀಲ್ಡಿಂಗ್ ವಿಭಾಗದ ಉಸ್ತುವಾರಿ ವಹಿಸಲಿದ್ದಾರೆ.
ಉತ್ತಪ್ಪ 2008ರ ಮೊದಲ ಆವೃತ್ತಿಯ IPL ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ದಿಲೀಪ್ ಅವರು ಸುಮಾರು ಐದು ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ತಂಡದಲ್ಲಿದ್ದರು.
ನೂತನ ಸಹಾಯಕ ಸಿಬ್ಬಂದಿಯಾಗಿ ನೇಮಕಗೊಂಡಿರುವ ಬಹುತೇಕ ಸದಸ್ಯರು ರೋಹಿತ್ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದಾರೆ. ಹೀಗಾಗಿ ರೋಹಿತ್ ಅವರು ಮುಂಬೈ ನಾಯಕತ್ವವನ್ನು ಮತ್ತೊಮ್ಮೆ ವಹಿಸಿಕೊಂಡು ಮುಂಬೈ ಇಂಡಿಯನ್ಸ್ ತಂಡದ ಆರು ವರ್ಷಗಳ IPL ಪ್ರಶಸ್ತಿಯ ಬರ ನೀಗಿಸಲು ಸಜ್ಜಾಗಿದ್ದಾರೆ. 2020ರಲ್ಲಿ ಕೊನೆಯ ಬಾರಿ IPL ಪ್ರಶಸ್ತಿ ಗೆದ್ದಿರುವ ಮುಂಬೈ ತಂಡವು 2026ರಲ್ಲಿ ಆರನೇ ಸ್ಥಾನ ಪಡೆದಿತ್ತು.






