ಟೆಸ್ಟ್ ಕ್ರಿಕೆಟ್ಗೆ ರೋಹಿತ್ ಶರ್ಮಾ ನಿವೃತ್ತಿ ಘೋಷಣೆ

Photo | AP
ಮುಂಬೈ: ಟೆಸ್ಟ್ ಕ್ರಿಕೆಟ್ನಿಂದ ತಕ್ಷಣದಿಂದ ಜಾರಿಗೆ ಬರುವಂತೆ ನಿವೃತ್ತಿ ಹೊಂದಿರುವುದಾಗಿ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಬುಧವಾರ ಘೋಷಿಸಿದ್ದಾರೆ.
‘‘ನಾನು ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂಬುದಾಗಿ ನಿಮಗೆಲ್ಲಾ ತಿಳಿಸಲು ಬಯಸುತ್ತೇನೆ. ಬಿಳಿ ದಿರಿಸಿನಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವುದು ನನಗೆ ದೊರೆತ ಪರಮೋಚ್ಛ ಗೌರವವಾಗಿದೆ. ಈ ಎಲ್ಲಾ ವರ್ಷಗಳಲ್ಲಿ ನೀವು ನನಗೆ ನೀಡಿರುವ ಪ್ರೀತಿ ಮತ್ತು ಬೆಂಬಲಕ್ಕೆ ನಾನು ನಿಮಗೆ ಆಭಾರಿಯಾಗಿದ್ದೇನೆ. ಏಕದಿನ ಕ್ರಿಕೆಟ್ ನಲ್ಲಿ ಭಾರತದ ಪರವಾಗಿ ಆಡುವುದನ್ನು ನಾನು ಮುಂದುವರಿಸುತ್ತೇನೆ’’ ಎಂದು ರೋಹಿತ್ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.
ಆಸ್ಟ್ರೇಲಿಯ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯವು 38 ವರ್ಷದ ರೋಹಿತ್ ರ ಕೊನೆಯ ಟೆಸ್ಟ್ ಆಗಿತ್ತು. ಆ ಪಂದ್ಯದಲ್ಲಿ ಭಾರತ ಸೋಲನುಭವಿಸಿದೆ. ಐದನೇ ಟೆಸ್ಟ್ಗೆ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆ ಸರಣಿಯನ್ನು ಭಾರತವು 1-3 ಅಂತರದಿಂದ ಸೋತಿದೆ.
ರೋಹಿತ್ ಟೆಸ್ಟ್ನಲ್ಲಿ 116 ಇನಿಂಗ್ಸ್ಗಳಿಂದ 4,301 ರನ್ಗಳನ್ನು 40.57ರ ಸರಾಸರಿಯಲ್ಲಿ ಗಳಿಸಿದ್ದಾರೆ. ಇದರಲ್ಲಿ 12 ಶತಕಗಳು ಮತ್ತು 18 ಅರ್ಧ ಶತಕಗಳಿವೆ.
ಜೂನ್-ಜುಲೈಯಲ್ಲಿ ಇಂಗ್ಲೆಂಡ್ನಲ್ಲಿ ನಡೆಯಲಿರುವ ಆ ದೇಶದ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ನಾಯಕತ್ವವನ್ನು ರೋಹಿತ್ ವಹಿಸಿಕೊಳ್ಳುವರೆಂದು ನಿರೀಕ್ಷಿಸಲಾಗಿತ್ತು. ಆದರೆ, ಆ ಸರಣಿಗೆ ತಂಡವನ್ನು ಘೋಷಿಸುವ ಮೊದಲೇ ಅವರು ಕೆಂಪು ಚೆಂಡಿನ ಕ್ರೀಡಾ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.
2024ರಲ್ಲಿ ರೋಹಿತ್ 8 ಟೆಸ್ಟ್ ಪಂದ್ಯಗಳ 15 ಇನಿಂಗ್ಸ್ಗಳಲ್ಲಿ ಕೇವಲ 10.93ರ ಸರಾಸರಿಯಲ್ಲಿ ರನ್ಗಳನ್ನು ಗಳಿಸಿದ್ದಾರೆ. ಅವರು 10 ಇನಿಂಗ್ಸ್ಗಳಲ್ಲಿ ಕೇವಲ ಒಂದಂಕಿ ಮೊತ್ತಗಳನ್ನು ಗಳಿಸಿದ್ದರು.
ರೋಹಿತ್ 25 ಟೆಸ್ಟ್ಗಳಲ್ಲಿ ಭಾರತೀಯ ತಂಡದ ನಾಯಕತ್ವ ವಹಿಸಿದ್ದಾರೆ. ಈ ಪೈಕಿ 12 ಪಂದ್ಯಗಳಲ್ಲಿ ಭಾರತ ಜಯಿಸಿದೆ ಮತ್ತು 9ರಲ್ಲಿ ಸೋತಿದೆ.
ರೋಹಿತ್ ಕಳೆದ ವರ್ಷದ ಜೂನ್ನಲ್ಲಿ ಅಂತರ್ರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು.
►ಶುಭಮನ್ ಗಿಲ್ ನೂತನ ಟೆಸ್ಟ್ ನಾಯಕ?
ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ಬಳಿಕ, ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮುಂಬರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತೀಯ ತಂಡದ ನಾಯಕನಾಗುವ ಸ್ಪರ್ಧೆಯಲ್ಲಿ ಶುಭಮನ್ ಗಿಲ್ ಮುಂಚೂಣಿಯಲ್ಲಿದ್ದಾರೆ.
ಶುಭಮನ್ ಗಿಲ್ ಈಗ ಏಕದಿನ ಮತ್ತು ಟಿ20 ಕ್ರಿಕೆಟ್ ನಲ್ಲಿ ಭಾರತ ತಂಡದ ಉಪನಾಯಕನಾಗಿದ್ದಾರೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಮಂಡಳಿಯು ದೀರ್ಘಾವಧಿ ನಾಯಕನ ಹುಡುಕಾಟದಲ್ಲಿದೆ. ಎಲ್ಲಾ ಐದು ಪಂದ್ಯಗಳಿಗೆ ಜಸ್ಪ್ರಿತ್ ಬುಮ್ರಾ ಲಭ್ಯವಾಗುವ ಸಾಧ್ಯತೆ ಇಲ್ಲದಿರುವ ಹಿನ್ನೆಲೆಯಲ್ಲಿ ಪ್ರಧಾನ ಕೋಚ್ ಗೌತಮ್ ಗಂಭೀರ್ ರ ಮಾರ್ಗದರ್ಶನದಲ್ಲಿ ಯುವ ನಾಯಕನೊಬ್ಬನನ್ನು ರೂಪಿಸಲು ಮುಂದಾಗಿದ್ದಾರೆ.
25ರ ಹರೆಯದ ಗಿಲ್ ಎಲ್ಲಾ ಮೂರು ಕ್ರಿಕೆಟ್ ಪ್ರಕಾರಗಳಲ್ಲಿ, ಭಾರತ ತಂಡದಲ್ಲಿ ನಿಯಮಿತವಾಗಿ ಆಡುತ್ತಿದ್ದಾರೆ. ಐಪಿಎಲ್ ನಲ್ಲಿ ಕಳೆದ 2 ಋತುಗಳಲ್ಲಿ ಅವರು ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮುಖ್ಯವಾಗಿ ಒತ್ತಡದಲ್ಲಿ, ಶಾಂತ ಮತ್ತು ಸಮಚಿತ್ತತೆಯಿಂದ ವ್ಯವಹರಿಸುವ ಅವರ ಗುಣವನ್ನು ಎಲ್ಲರೂ ಪ್ರಶಂಸಿಸಿದ್ದಾರೆ.
ಅವರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕನಾಗಿ ಮತ್ತು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅನುಭವವಿದೆ. ಅವರು 32 ಟೆಸ್ಟ್ ಪಂದ್ಯಗಳಲ್ಲಿ 5 ಶತಕಗಳು ಮತ್ತು 7 ಅರ್ಧ ಶತಕಗಳನ್ನು ಒಳಗೊಂಡ 1,893 ರನ್ ಗಳಿಸಿದ್ದಾರೆ.