ಏಕದಿನ ಪಂದ್ಯದಿಂದ ನಿವೃತ್ತಿ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು?

PC | PTI
ಹೊಸದಿಲ್ಲಿ : ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಿಂದ ನಿವೃತ್ತಿಯಾಗುವ ಬಗೆಗಿನ ವದಂತಿಗಳ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಹಿರಿಯ ಪತ್ರಕರ್ತರೊಬ್ಬರ ಜತೆ ಮಾತನಾಡಿದ ಅವರು, ಏಕದಿನ ಕ್ರಿಕೆಟ್ನಿಂದ ಇನ್ನೂ ನಿವೃತ್ತಿಯಾಗಿಲ್ಲ; ಯಾವಾಗ ತಂಡದಿಂದ ಹೊರನಡೆಯಬೇಕು ಎನ್ನುವ ಬಗ್ಗೆ ತಮಗೆ ಸ್ಪಷ್ಟ ಅರಿವು ಇದೆ ಎಂದು ಹೇಳಿದ್ದಾರೆ.
ತಮ್ಮ ಬ್ಯಾಟಿಂಗ್ ವಿಕಾಸಗೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು "ನಾನು ಬ್ಯಾಟಿಂಗ್ ಮಾಡುವ ರೀತಿಯಲ್ಲೇ ನಾನು ಆಡುತ್ತೇನೆ; ನನ್ನ ಸಮಯವನ್ನು ನಾನು ತೆಗೆದುಕೊಳ್ಳುತ್ತೇನೆ" ಎಂದು ಸ್ಪಷ್ಟಪಡಿಸಿದರು.
"ಈ ಮೊದಲು ನಾನು ಮೊದಲ 10 ಓವರ್ ಗಳಲ್ಲಿ 30 ಎಸೆತಗಳನ್ನು ಆಡಿ ಕೇವಲ 10 ರನ್ ಗಳಿಸುತ್ತಿದ್ದೆ. ಆದರೆ ಈಗ ನಾನು 20 ಎಸೆತಗಳನ್ನು ಆಡಿದರೆ 30, 35 ಅಥವಾ 40 ರನ್ ವರೆಗೂ ನಾನು ಏಕೆ ಗಳಿಸಬಾರದು? ನಾನು ಚೆನ್ನಾಗಿ ಆಡುವಾಗ, ರನ್ಗೆ ವೇಗ ನೀಡಲು ದೊಡ್ಡ ಹೊಡೆತಗಳ ಮೂಲಕ ಮೊದಲ 10 ಓವರ್ ಗಳಲ್ಲಿ 80 ರನ್ ಗಳಿಸುವುದು ಕೆಟ್ಟದೇನಲ್ಲ; ಸದ್ಯಕ್ಕೆ ನಾನು ಹೀಗೆ ಯೋಚಿಸುತ್ತೇನೆ" ಎಂದು ಬಣ್ಣಿಸಿದರು.
"ನಾನು ರನ್ ಗಳಿಸಿದ್ದೇನೆ. ಇದೀಗ ನಾನು ಭಿನ್ನ ವಿಧಾನದಲ್ಲಿ ಕ್ರಿಕೆಟ್ ಆಡಲು ಬಯಸಿದ್ದೇನೆ. ಯಾವುದನ್ನೂ ನಾನು ಲಘುವಾಗಿ ಪರಿಗಣಿಸಿಲ್ಲ. ಕೇವಲ 20-30 ರನ್ ಗಳಿಸಿ ಆಡುವುದು ಮುಂದುವರಿಯುತ್ತೇನೆ ಎಂದು ಭಾವಿಸಬೇಡಿ. ನಾನು ಬಯಸಿದಂತೆ ಮೈದಾನದಲ್ಲಿ ಆಡಲು ಸಾಧ್ಯವಾಗುತ್ತಿಲ್ಲ ಎಂದು ಭಾವನೆ ಬಂದ ದಿನ ನಾನು ಆಡುವುದು ನಿಲ್ಲಿಸುತ್ತೇನೆ. ಇದು ಖಚಿತ. ಆದರೆ ಸದ್ಯಕ್ಕೆ ನಾನು ಮಾಡುತ್ತಿರುವುದು ತಂಡಕ್ಕೆ ನೆರವಾಗುತ್ತಿದೆ ಎಂಬ ಭಾವನೆ ನನ್ನದು" ಎಂದು ವಿವರಿಸಿದರು.







