ರೋಹಿತ್ ಶರ್ಮಾ ವಿವಾದ: ಅಗರ್ಕರ್ಗೆ ಕೊಕ್; ಆಯ್ಕೆ ಸಮಿತಿ ಮುಖ್ಯಸ್ಥನ ಸ್ಥಾನಕ್ಕೆ ವಿ.ವಿ.ಎಸ್ ಲಕ್ಷ್ಮಣ್?

Photo: x.com/Sports_NDTV
ಹೊಸದಿಲ್ಲಿ : ರೋಹಿತ್ ಶರ್ಮಾ ಅವರ ಏಕದಿನ ವಿಶ್ವಕಪ್ ವಿವಾದದಿಂದಾಗಿ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ತಮ್ಮ ಹುದ್ದೆ ಕಳೆದುಕೊಳ್ಳುವ ಸಾಧ್ಯತೆಯಿದೆ. ಬಿಸಿಸಿಐ ಅವರ ಬದಲಿಗೆ ವಿ.ವಿ.ಎಸ್ ಲಕ್ಷ್ಮಣ್ ಅವರನ್ನು ನೇಮಿಸಲು ಒಲವು ಹೊಂದಿದೆ ಎಂದು NDTV ವರದಿ ಮಾಡಿದೆ.
ಅಗರ್ಕರ್ ಅವರ ಒಪ್ಪಂದವು ಜೂನ್ 2026 ರಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಆದರೆ ಮಂಡಳಿಯು ಅವರಿಗೆ ಮೂರು ತಿಂಗಳ ವಿಸ್ತರಣೆಯನ್ನು ನೀಡಿತ್ತು. 2027 ರ ಏಕದಿನ ವಿಶ್ವಕಪ್ ಮುಕ್ತಾಯದವರೆಗೆ ಅವರಿಗೆ ಮತ್ತೊಂದು ವಿಸ್ತರಣೆ ಸಿಗಬಹುದು ಮತ್ತು ಅವರು ಆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು.
ಆದರೆ, ಇತ್ತೀಚಿನ ಕೆಲವು ಬೆಳವಣಿಗೆಗಳು ಆ ಸಾಧ್ಯತೆಯನ್ನು ಕುಗ್ಗಿಸಿದ್ದು, ಅವರ ಅಧಿಕಾರಾವಧಿಯು ಒಂದು ತಿಂಗಳಲ್ಲಿ ಕೊನೆಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಅವರ ಸ್ಥಾನಕ್ಕೆ ಪ್ರಸ್ತುತ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥರಾಗಿರುವ ವಿ.ವಿ.ಎಸ್ ಲಕ್ಷ್ಮಣ್ ಅವರನ್ನು ತರಲು ಬಿಸಿಸಿಐ ಯೋಜಿಸುತ್ತಿದೆ ಎನ್ನಲಾಗಿದೆ.
ಭಾರತದ ಏಕದಿನ ತಂಡದಲ್ಲಿ ರೋಹಿತ್ ಶರ್ಮಾ ಅವರ ಭವಿಷ್ಯದ ಬಗೆಗಿನ ನಾಟಕೀಯ ಬೆಳವಣಿಗೆಗಳು ಈ ಅನಿರೀಕ್ಷಿತ ಬದಲಾವಣೆಯ ಸುದ್ದಿಯೊಂದಿಗೆ ನಂಟು ಹೊಂದಿದೆ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯು ರೋಹಿತ್ ಅವರ ಕೊನೆಯ ಸರಣಿಯಾಗಲಿದೆ ಎಂದು ವರದಿಯಾಗಿತ್ತು. ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಮುಂದಿನ ಸರಣಿಗಳಿಂದ ರೋಹಿತ್ ಅವರನ್ನು ಹೊರಗಿಡುವ ಬಗ್ಗೆ ಗೌತಮ್ ಗಂಭೀರ್ ನೇತೃತ್ವದ ತಂಡದ ಮ್ಯಾನೇಜ್ಮೆಂಟ್ ಜೊತೆ ಮಾತನಾಡಿದೆ ಎಂದು ದೈನಿಕ್ ಜಾಗರಣ್ ವರದಿ ಮಾಡಿತ್ತು.
ಆದರೆ, ಲಾರ್ಡ್ಸ್ನಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯವೇ ರೋಹಿತ್ ಅವರ ಕೊನೆಯ ಪಂದ್ಯ ಎಂದು ಸುದ್ದಿ ಹೊರಬಿದ್ದಾಗ ಅನಿರೀಕ್ಷಿತ ತಿರುವು ಎದುರಾಯಿತು. ಆ ಅಂತಿಮ ಪಂದ್ಯದಲ್ಲಿ 'ಹಿಟ್ಮ್ಯಾನ್' ಶತಕ ಬಾರಿಸುವ ಮೂಲಕ ಆಯ್ಕೆದಾರರು ಮತ್ತು ತಂಡದ ಮ್ಯಾನೇಜ್ಮೆಂಟ್ನ್ನು ಇಕ್ಕಟ್ಟಿಗೆ ಸಿಲುಕಿಸಿದರು.
ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ವಿಷಯ ಸೋರಿಕೆಯಾದ ಬೆನ್ನಲ್ಲೇ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ PTI ಗೆ ಪ್ರತಿಕ್ರಿಯಿಸಿ, "ರೋಹಿತ್ ಭಾರತೀಯ ಏಕದಿನ ತಂಡದ ಖಾಯಂ ಸದಸ್ಯರಾಗಿದ್ದಾರೆ ಮತ್ತು ಅವರು ತಂಡದ ಯೋಜನೆಗಳಲ್ಲಿ ಇರುವವರೆಗೂ ದೇಶವನ್ನು ಪ್ರತಿನಿಧಿಸುವುದನ್ನು ಮುಂದುವರಿಸುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಲಾರ್ಡ್ಸ್ ಏಕದಿನ ಪಂದ್ಯ ಅವರ ಕೊನೆಯ ಪಂದ್ಯವಾಗುವುದಿಲ್ಲ" ಎಂದು ಹೇಳಿಕೆ ನೀಡಿದರು.
ಈ ನಡುವೆ, ರೋಹಿತ್ 2027 ರ ಏಕದಿನ ವಿಶ್ವಕಪ್ ಆಡುವುದನ್ನು ತಂಡದ ಮ್ಯಾನೇಜ್ಮೆಂಟ್ ಬಯಸುತ್ತಿಲ್ಲ ಎಂದು ವರದಿಯಾಗಿದೆ.
ಈ ಅನಿರೀಕ್ಷಿತ ಬೆಳವಣಿಗೆಗಳು ಆಯ್ಕೆ ಸಮಿತಿ ಮುಖ್ಯಸ್ಥನ ಬದಲಾವಣೆಗೆ ಕಾರಣವಾಗಬಹುದು ಎಂದು ಕ್ರಿಕೆಟ್ ಲೋಕದಲ್ಲಿ ಚರ್ಚೆಯಾಗುತ್ತಿವೆ ಎಂದು ವರದಿಯಾಗಿದೆ.






