Vijay Hazare Trophy | ಕೊಹ್ಲಿ ಕೈ ತಪ್ಪಿದ ಸೆಂಚುರಿ; ರೋಹಿತ್ 'ಗೋಲ್ಡನ್ ಡಕ್'

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (Photo: PTI)
ಬೆಂಗಳೂರು/ಜೈಪುರ: ದೇಶೀಯ ಏಕದಿನ ಕ್ರಿಕೆಟ್ ನ ಪ್ರಮುಖ ಟೂರ್ನಿಯಾದ ವಿಜಯ್ ಹಝಾರೆ ಟ್ರೋಫಿಯಲ್ಲಿ ದಿಲ್ಲಿ ತಂಡದಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ ಅವರ ಉತ್ತಮ ಫಾರ್ಮ್ ಮುಂದುವರಿದಿದೆ. ಶುಕ್ರವಾರ (ಡಿ.26) ಬೆಂಗಳೂರಿನಲ್ಲಿ ನಡೆದ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಆಕ್ರಮಣಕಾರಿ ಅರ್ಧಶತಕದ ಇನ್ನಿಂಗ್ಸ್ ಆಡಿದರು.
ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಗಮನ ಸೆಳೆದಿದ್ದ ವಿರಾಟ್, ಈ ಪಂದ್ಯದಲ್ಲೂ ಆರಂಭದಿಂದಲೇ ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಿದರು. ಆರಂಭಿಕ ಕೆಲ ಓವರ್ಗಳಲ್ಲಿ ಸಂಯಮ ತೋರಿದ ಅವರು, ಬಳಿಕ ರನ್ ವೇಗ ಹೆಚ್ಚಿಸಿದರು. ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವಿರಾಟ್, ಮತ್ತೊಂದು ದೊಡ್ಡ ಇನ್ನಿಂಗ್ಸ್ ನಿರೀಕ್ಷೆ ಮೂಡಿಸಿದರು.
ಅರ್ಪಿತ್ ರಾಣಾ ಜೊತೆ ಎರಡನೇ ವಿಕೆಟ್ಗೆ 72 ರನ್ಗಳ ಉಪಯುಕ್ತ ಜೊತೆಯಾಟ ನಡೆಸಿದ ವಿರಾಟ್, ದಿಲ್ಲಿಯ ಇನ್ನಿಂಗ್ಸ್ ಕಟ್ಟಿದರು. 61 ಎಸೆತಗಳನ್ನು ಎದುರಿಸಿದ ಅವರು 77 ರನ್ ಗಳಿಸಿದ್ದ ವೇಳೆ ಸ್ಟಂಪ್ ಔಟ್ ಆಗಿ ಪೆವಿಲಿಯನ್ಗೆ ಮರಳಿದರು. ಅವರ ಇನ್ನಿಂಗ್ಸ್ನಲ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು.
ಇತ್ತ ಜೈಪುರದಲ್ಲಿ, ಮೊದಲ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ರೋಹಿತ್ ಶರ್ಮಾ ಉತ್ತರಾಖಂಡದ ವಿರುದ್ಧದ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು. ಅವರು ಎದುರಿಸಿದ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ಶೂನ್ಯಕ್ಕೆ ಔಟ್ ಆಗಿ ಪೆವಿಲಿಯನ್ ಸೇರಿದರು.







