ಲಾರ್ಡ್ಸ್ ನಲ್ಲಿ ರೋಹಿತ್ ಶರ್ಮಾ ಶತಕ; ಇತಿಹಾಸ ನಿರ್ಮಿಸಿದ ಹಿಟ್ಮ್ಯಾನ್

ರೋಹಿತ್ ಶರ್ಮಾ | Photo Credit :PTI
ಲಂಡನ್: ಲಾರ್ಡ್ಸ್ ನಲ್ಲಿ ರವಿವಾರ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಭಾರತದ ಬ್ಯಾಟರ್ ರೋಹಿತ್ ಶರ್ಮಾ ಶತಕ ದಾಖಲಿಸಿ ಹಲವು ದಾಖಲೆಗಳನ್ನು ನಿರ್ಮಿಸಿದರು.
388 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡವು 24 ಓವರುಗಳಲ್ಲಿ ಶುಭ್ಮನ್ ಗಿಲ್ ವಿಕೆಟ್ ಕಳೆದುಕೊಂಡಿತು. ಬಳಿಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜವಾಬ್ದಾರಿಯುತ ಜೊತೆಯಾಟದ ಮೂಲಕ ತಂಡಕ್ಕೆ ನೆರವಾದರು.
ರೋಹಿತ್ 84 ಎಸೆತಗಳಲ್ಲಿ ತಮ್ಮ ವೃತ್ತಿಜೀವನದ 34ನೇ ಏಕದಿನ ಶತಕ ಪೂರೈಸಿದರು. ನಿವೃತ್ತಿ ಕುರಿತ ಇತ್ತೀಚಿನ ಊಹಾಪೋಹಗಳ ನಡುವೆಯೇ ಬಂದ ಈ ಶತಕದೊಂದಿಗೆ ಲಾರ್ಡ್ಸ್ ನಲ್ಲಿ ಏಕದಿನ ಶತಕ ದಾಖಲಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ, ಲಾರ್ಡ್ಸ್ನಲ್ಲಿ ಏಕದಿನ ಶತಕ ಬಾರಿಸಿದ ಅತ್ಯಂತ ಹಿರಿಯ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್, ನಿಗದಿತ 50 ಓವರ್ ಗಳಲ್ಲಿ 3 ವಿಕೆಟ್ ಗೆ 387 ರನ್ ಗಳಿಸಿತು.
ಆರಂಭಿಕ ಬ್ಯಾಟರ್ ಗಳಾದ ಬೆನ್ ಡಕೆಟ್ (141) ಮತ್ತು ಜಾಕೋಬ್ ಬೆಥೆಲ್ (91) ಮೊದಲ ವಿಕೆಟ್ ಗೆ 192 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು. ಈ ಜೋಡಿ ಭಾರತದ ಬೌಲರ್ ಗಳಿಗೆ 30ಕ್ಕೂ ಹೆಚ್ಚು ಓವರ್ಗಳ ಕಾಲ ವಿಕೆಟ್ ಸಿಗದಂತೆ ಆಡಿತು.
ಜೋ ರೂಟ್ 48 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ ಅಜೇಯ 74 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಜೋಸ್ ಬಟ್ಲರ್ 13 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ ಗಳೊಂದಿಗೆ ಅಜೇಯ 41 ರನ್ ಸಿಡಿಸಿ ಇಂಗ್ಲೆಂಡ್ ನ ಮೊತ್ತವನ್ನು 387 ರನ್ಗಳಿಗೆ ಏರಿಸಿದರು.






