ರೋಹಿತ್, ವಿರಾಟ್ 2027ರ ವಿಶ್ವಕಪ್ನಲ್ಲಿ ಆಡುವ ಗ್ಯಾರಂಟಿ ಇಲ್ಲ : ಎಬಿ ಡಿವಿಲಿಯರ್ಸ್

ರೋಹಿತ್ ಶರ್ಮಾ , ವಿರಾಟ್ ಕೊಹ್ಲಿ | Photo Credit : PTI
ಹೊಸದಿಲ್ಲಿ, ಅ.7: ಆಸ್ಟ್ರೇಲಿಯ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತದ ನೂತನ ನಾಯಕನಾಗಿ ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ವಿಶೇಷವಾಗಿ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದೀರ್ಘ ವಿರಾಮದ ನಂತರ ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ಮರಳಿದ್ದಾರೆ.
ಈ ಹೆಜ್ಜೆಯನ್ನು ಬೆಂಬಲಿಸಿದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್, ಇದು ಸರಿಯಾದ ದಿಕ್ಕಿನಲ್ಲಿ ಇಟ್ಟಿರುವ ಹೆಜ್ಜೆಯಾಗಿದೆ. ಆಯ್ಕೆ ಸಮಿತಿಯು ದೀರ್ಘಕಾಲೀನ ಚಿಂತನೆಯ ಬಗ್ಗೆಯೂ ಸುಳಿವು ನೀಡಿದೆ ಎಂದರು.
‘‘ಮುಂದಿನ ವಿಶ್ವಕಪ್ಗೆ ರೋಹಿತ್ ಹಾಗೂ ಕೊಹ್ಲಿ ಇರುತ್ತಾರೆ ಎಂಬ ಬಗ್ಗೆ ಗ್ಯಾರಂಟಿ ಇಲ್ಲ. ಶುಭಮನ್ ಗಿಲ್ ಅವರನ್ನು ಏಕದಿನ ತಂಡದ ನಾಯಕನಾಗಿ ನೇಮಿಸುವಾಗ ಆಯ್ಕೆ ಸಮಿತಿಯು ಈ ರೀತಿ ಯೋಚಿಸಿರಬಹುದು. ಅದ್ಭುತ ಫಾರ್ಮ್ನಲ್ಲಿರುವ ಯುವ ಆಟಗಾರನಿಗೆ ವಿಶ್ವಕಪ್ನಲ್ಲಿ ಅವಕಾಶ ಸಿಗುವ ಸಾಧ್ಯತೆ ಅಧಿಕವಿದೆ’’ ಎಂದು ಡಿ ವಿಲಿಯರ್ಸ್ ತಮ್ಮ ಯೂ ಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
ರೋಹಿತ್ ಹಾಗೂ ವಿರಾಟ್ ಅವರನ್ನು ಇತ್ತೀಚೆಗೆ ಪ್ರಕಟಿಸಿರುವ ಗಿಲ್ ನಾಯಕತ್ವದ ಭಾರತದ ಏಕದಿನ ತಂಡಕ್ಕೆ ಸೇರಿಸಲಾಗಿದೆ. ಮಾರ್ಚ್ನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯ ನಂತರ ಈ ಇಬ್ಬರು ಹಿರಿಯ ಆಟಗಾರರು ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟನ್ನು ಆಡಿಲ್ಲ. ಈ ಸರಣಿಯು ಅ.19ರಂದು ಆಸ್ಟ್ರೇಲಿಯ ತಂಡದ ವಿರುದ್ಧ ಆರಂಭವಾಗಲಿದ್ದು, ರೋಹಿತ್ ಹಾಗೂ ವಿರಾಟ್ 2025ರ ಆವೃತ್ತಿಯ ಐಪಿಎಲ್ ಟೂರ್ನಿಯ ನಂತರ ಸ್ಪರ್ಧಾತ್ಮಕ ಕ್ರಿಕೆಟಿಗೆ ವಾಪಸಾಗಲಿದ್ದಾರೆ.
‘‘ರೋಹಿತ್ ಹಾಗೂ ವಿರಾಟ್ ಕಳೆದ ಕೆಲವು ವರ್ಷಗಳಿಂದ ಉತ್ತಮ ಆಟಗಾರರಾಗಿದ್ದಾರೆ. ಒಂದು ಮಾದರಿಯ ಕ್ರಿಕೆಟ್ನಲ್ಲಿ ಆಡುವಾಗ ಆಯ್ಕೆಗಾರರು ಈ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇಂತಹ ಆಟಗಾರರ ಫಾರ್ಮ್ ಹಾಗೂ ಫಿಟ್ನೆಸ್ ನಿರ್ಣಯಿಸಲು ಸಾಧ್ಯವಿಲ್ಲ’’ ಎಂದು ಭಾರತದ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ದಿಲಿಪ್ ವೆಂಗ್ಸರ್ಕಾರ್ ಹೇಳಿದ್ದಾರೆ.
‘‘ಇಬ್ಬರೂ ಆಟಗಾರರು ಕಡ್ಡಾಯ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆದರೆ ಆಸ್ಟ್ರೇಲಿಯ ಸರಣಿಗೆ ಅವರ ಆಯ್ಕೆಯು 2027ರ ವಿಶ್ವಕಪ್ ಟೂರ್ನಿಗೆ, ಭಾರತದ ದೀರ್ಘಕಾಲೀನ ಏಕದಿನ ಕ್ರಿಕೆಟ್ ಯೋಜನೆಗಳಲ್ಲಿ ಅವರಿಗೆ ಸ್ಥಾನ ಖಚಿತಪಡಿಸುವುದಿಲ್ಲ’’ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಸ್ಪಷ್ಟಪಡಿಸಿದ್ದಾರೆ.







