ಕೊಚ್ಚಿಗೆ ರೊನಾಲ್ಡಿನೊ ಆಗಮನ : ನಾಳೆ ಭಾರತ ಲೆಜಂಡ್ಸ್ ವಿರುದ್ಧ ಪಂದ್ಯ

Photo Credit: PTI
ಕೊಚ್ಚಿ: ಫಿಫಾ ವಿಶ್ವಕಪ್ ಮತ್ತು ಬ್ಯಾಲನ್ ಡಿ’ಓರ್ ಪ್ರಶಸ್ತಿ ವಿಜೇತ ಬ್ರೆಝಿಲ್ನ ರೊನಾಲ್ಡಿನೊ ಮಂಗಳವಾರ ಕೊಚ್ಚಿಗೆ ಆಗಮಿಸಿದ್ದಾರೆ. ಬುಧವಾರ ನಡೆಯಲಿರುವ ಭಾರತೀಯ ಫುಟ್ಬಾಲ್ ದಿಗ್ಗಜರ ವಿರುದ್ಧದ ಪ್ರದರ್ಶನ ಪಂದ್ಯದಲ್ಲಿ ಅವರು ಭಾಗವಹಿಸಲಿದ್ದಾರೆ.
ಮತ್ತೊಬ್ಬ ಬ್ಯಾಲನ್ ಡಿ’ಓರ್ ಪ್ರಶಸ್ತಿ ವಿಜೇತ ರಿವಾಲ್ಡೊ ಅವರನ್ನೊಳಗೊಂಡ ಬ್ರೆಝಿಲ್ ಲೆಜಂಡ್ಸ್ ತಂಡದೊಂದಿಗೆ ರೊನಾಲ್ಡಿನೊ ಮಧ್ಯಾಹ್ನ ಕೊಚ್ಚಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ದಕ್ಷಿಣ ಅಮೆರಿಕದ ಬಲಿಷ್ಠ ಫುಟ್ಬಾಲ್ ತಂಡವಾಗಿರುವ ಬ್ರೆಝಿಲ್ ಕೊನೆಯ ಬಾರಿ ವಿಶ್ವಕಪ್ ಟ್ರೋಫಿ ಗೆದ್ದಿದ್ದು 2002ರಲ್ಲಿ. ಆ ತಂಡದಲ್ಲಿ ರಿವಾಲ್ಡೊ ಮತ್ತು ರೊನಾಲ್ಡಿನೊ ಆಡಿದ್ದರು.
ಚೆನ್ನೈ ಮೂಲದ ಗಾಮೆನ್ ಸ್ಪೋರ್ಟ್ಸ್ ಆಯೋಜಿಸಿರುವ ಬುಧವಾರದ ಪ್ರದರ್ಶನ ಪಂದ್ಯವು ಎರಡನೇ ಆವೃತ್ತಿಯಾಗಿದೆ. ಕಳೆದ ವರ್ಷ ಈ ಪಂದ್ಯವು ಚೆನ್ನೈನಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಬ್ರೆಝಿಲ್ ಲೆಜಂಡ್ಸ್ 2-1 ಅಂತರದಿಂದ ಜಯ ಗಳಿಸಿತ್ತು.
ರೊನಾಲ್ಡಿನೊ ಒಂದು ದಶಕದ ನಂತರ ಕೇರಳಕ್ಕೆ ಮರಳಿದ್ದಾರೆ. 2016ರಲ್ಲಿ ಅವರು ಫುಟ್ಬಾಲ್ ಪಂದ್ಯಾವಳಿಯೊಂದರ ರಾಯಭಾರಿಯಾಗಿ ಕೋಝಿಕ್ಕೋಡ್ಗೆ ಆಗಮಿಸಿದ್ದರು.




